ಬದಿಯಡ್ಕ: 'ಕಲಾವಿದರಿಗೆ, ಸಾಹಿತಿಗಳಿಗೆ ಪರಿಸರವೂ ಪಠ್ಯ. ಪರಿಸರದಲ್ಲಿನ ವಿಶೇಷಗಳೇ ಕವಿಯ ಕಲ್ಪನೆಗೆ ಜೀವ ತುಂಬುತ್ತವೆ. ಇದು ಸಾಹಿತ್ಯದ ಶಕ್ತಿ' ಎಂದು ಪಂಜಿಕಲ್ಲಿನ ಎಸ್ ವಿ ಎ ಯು ಪಿ ಶಾಲೆಯ ಸಂಸ್ಕ್ರತ ಶಿಕ್ಷಕಿ ಪಿ. ವಿಜಯಲಕ್ಷ್ಮಿ ಹೇಳಿದರು.
ಅವರು ಗುರುವಾರ ಪಂಜಿಕಲ್ಲು ಶಾಲೆಯ ವಿದ್ಯಾರಂಗದ ಆಶ್ರಯದಲ್ಲಿ ಶಾಲೆಯಲ್ಲಿ ನಡೆದ 'ಅರಳುವ ಮೊಗ್ಗುಗಳು' ಮಕ್ಕಳ ಚಟುವಟಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ವಿದ್ಯಾರಂಗದ ಸಂಚಾಲಕಿ, ಶಿಕ್ಷಕಿ ಕೆ ನಳಿನಾಕ್ಷಿ ಮಾತನಾಡಿ,'ನಿರಂತರ ಅಧ್ಯಯನದಿಂದ ಮಾತ್ರ ಸಾಹಿತ್ಯ ರಚನಾ ಶಕ್ತಿ ಕರಗತವಾಗುತ್ತದೆ. ಎಳವೆಯಲ್ಲಿ ಓದುವಿಕೆ ಸಹಿತ ಇತರ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು' ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕನ್ನಡ ಸಾಹಿತಿ ವಿರಾಜ್ ಅಡೂರು ಮಾತನಾಡಿ,'ಕಲಾವಿದರಿಗೆ, ಸಾಹಿತಿಗಳಿಗೆ ಮಾನಸಿಕ ದೃಢತೆ ಹೆಚ್ಚು. ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ, ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರಿಗೆ ಇದೆ. ಶೈಕ್ಷಣಿಕ ಬದುಕಿನಲ್ಲಿ ವಿದ್ಯಾರ್ಥಿಗಳು ವಿಚಾರಗಳ ಕ್ರೋಡೀಕರಣ ಮಾಡಬೇಕು' ಎಂದು ಹೇಳಿದರು. ಕಾರ್ಯಕ್ರಮದಲ್ಲಿ 'ಅರಳುವ ಮೊಗ್ಗುಗಳು' ಕೈಬರಹದ ಕೃತಿಯನ್ನು ವಿರಾಜ್ ಅಡೂರು ಬಿಡುಗಡೆ ಮಾಡಿದರು. ನಂತರ ವಿರಾಜ್ ಅಡೂರು ಅವರು ಮಕ್ಕಳಿಗಾಗಿ ರೇಖಾಚಿತ್ರ ಹಾಗೂ ಕವನ ರಚನೆಯ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಚಟುವಟಿಕೆಯಲ್ಲಿ ಭಾಗವಹಿಸಿದ ಚಿನ್ಮಯ ಗೌಡ, ವಿವೇಕ್ ರಾಜ್, ಶಾರ್ವರಿ, ರಚನಾ, ವಿಖ್ಯಾತ್, ದೀಪ ಸ್ವಾನುಭವವನ್ನು ಮಂಡಿಸಿದರು. ರಾಮಕೃಷ್ಣ ಮಾಸ್ತರ್, ಎಸ್ ಅನುಶ್ರೀ ಟೀಚರ್, ವಾಣಿಶ್ರೀ ಟೀಚರ್ ಸಹಕರಿಸಿದರು. ಶಿಕ್ಷಕಿ ಕೆ. ಅನಿತಾ ವಂದಿಸಿದರು. ಶಿಕ್ಷಕ ಶಿವಪ್ರಸಾದ ಸ್ವಾಗತಿಸಿ, ನಿರೂಪಿಸಿದರು.