ಇಸ್ಲಾಮಾಬಾದ್: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ 'ತಲ್ಲಾಖ್' ನೀಡಿರುವ ಪಾಕಿಸ್ತಾನಿ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ನಟಿ ಸನಾ ಜಾವೆದ್ ರನ್ನು ವಿವಾಹವಾಗಿದ್ದಾರೆ.
ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಮೂರನೇ ಮದುವೆಯಾಗಿದ್ದು, ನಟಿ ಸನಾ ಜಾವೇದ್ ಅವರನ್ನು ಶನಿವಾರದಂದು ಆತ್ಮೀಯ ಸಮಾರಂಭದಲ್ಲಿ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಘೋಷಿಸಿದ್ದಾರೆ. "ಅಲ್ಹಮ್ದುಲ್ಲಿಲಾಹ್. ನಾವು ಜೋಡಿಯಾಗಿದ್ದೇವೆ" ಎಂದು 41 ವರ್ಷದ ಕ್ರಿಕೆಟಿಗ ಮಲ್ಲಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಕಟಣೆಯ ನಂತರ, ಸನಾ ಜಾವೇದ್ ತನ್ನ Instagram ಬಯೋವನ್ನು "ಸನಾ ಶೋಯೆಬ್ ಮಲಿಕ್" ಎಂದು ಬದಲಾಯಿಸಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ಸನಾಗೆ ಎರಡನೇ ಮದುವೆ
41 ವರ್ಷದ ಶೋಯೆಬ್ ಮಲಿಕ್ ಅವರನ್ನು ವಿವಾಹ ಆಗಿರುವ ಸನಾ ಜಾವೇದ್ ಅವರಿಗೆ ಕೂಡ ಇದು ಎರಡನೇ ಮದುವೆ. ಸನಾ ಈ ಹಿಂದೆ ಪಾಕಿಸ್ತಾನಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹ ಆಗಿದ್ದರು. ಸದ್ಯ ಸನಾ ಮತ್ತು ಉಮರ್ ತಮ್ಮ ಹಳೆಯ ಫೋಟೋಗಳನ್ನು ಇನ್ಸ್ಟಾಗ್ರಾಮ್ನಿಂದ ಡಿಲೀಟ್ ಮಾಡಿದ್ದಾರೆ. ಸನಾ ಅವರ ಮೊದಲ ಮದುವೆ 2020 ರಲ್ಲಿ ನಡೆದಿದ್ದರೆ, ಈಗ ಅವರ ಎರಡನೇ ಮದುವೆ 2024 ರಲ್ಲಿ ಆಗಿದೆ.
ಶೋಯೆಬ್ ಈ ಹಿಂದೆ ಭಾರತದ ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗಿದ್ದರು. ಆದರೆ , ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹರಿದಾಡಿತ್ತು. ಇಬ್ಬರು ಬೇರ್ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇವುಗಳ ನಡುವೆ ಶೋಯಬ್ ಮಲಿಕ್ ಅವರ ಮದುವೆಯ ಸುದ್ದಿ ಬೆಳಕಿಗೆ ಬಂದಿದೆ.
ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಅವರ ವಿವಾಹವು 12 ಏಪ್ರಿಲ್ 2010 ರಂದು ನಡೆಯಿತು. ಇವರಿಬ್ಬರ ವಿವಾಹದ ಬಗ್ಗೆ ಭಾರತದಲ್ಲಿ ಸಾಕಷ್ಟು ವಿವಾದಗಳು ನಡೆದವು. ಇಬ್ಬರೂ ಹೈದರಾಬಾದ್‌ನಲ್ಲಿ ಮದುವೆಯಾಗಿದ್ದರು ಮತ್ತು 2018 ರಲ್ಲಿ ಸಾನಿಯಾ ಗಂಟು ಮಗುವಿಗೆ ಜನ್ಮ ನೀಡಿದ್ದರು. ಆದರೆ ಕೊರೋನ ನಂತರ, ಇಬ್ಬರ ನಡುವೆ ಅಸಮಾಧಾನ ಉಂಟಾಗಿತ್ತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಎರಡು ದಿನಗಳ ಹಿಂದೆಯಷ್ಟೇ ಸಾನಿಯಾ ಮಿರ್ಜಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ”ವಿಚ್ಛೇದನ ತುಂಬಾ ಕಷ್ಟ, ಮದುವೆ ಕೂಡ ತುಂಬಾ ಕಷ್ಟ,” ಎಂದು ಬರೆದುಕೊಂಡಿದ್ದರು.
ಈ ಮೂಲಕ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ವಿಚ್ಛೇದನ ಪಡೆದಿದ್ದಾರೆ ಎಂಬ ಸೂಚನೆ ಸಿಕ್ಕಿದ್ದವು. ಇದೀಗ ಅಧಿಕೃತವಾಗಿದೆ.