ಶ್ರೀನಗರ: ಆರೋಗ್ಯ ಕೇಂದ್ರಗಳನ್ನು "ಆಯುಷ್ಮಾನ್ ಆರೋಗ್ಯ ಮಂದಿರಗಳು" ಎಂದು ಮರುನಾಮಕರಣ ಮಾಡುವ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ಕ್ರಮವು ಲಡಾಖ್ನಲ್ಲಿ ತೀವ್ರ ವಿವಾದವನ್ನು ಹುಟ್ಟುಹಾಕಿದೆ. ಇದು ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅತ್ಯಂತ ಪ್ರಭಾವಿ ಬೌದ್ಧ ಸಂಘಟನೆ ಮತ್ತು ಚುನಾಯಿತ ಪ್ರತಿನಿಧಿಗಳು ಕರೆದಿದ್ದಾರೆ ಎಂದು thewire.in ವರದಿ ಮಾಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು 'ಆಯುಷ್ಮಾನ್ ಆರೋಗ್ಯ ಮಂದಿರಗಳು' ಎಂದು ಮರುನಾಮಕರಣ ಮಾಡಲು ನಿರ್ಧರಿಸಿತ್ತು. ಸಚಿವಾಲಯವು ನವೆಂಬರ್ 25, 2023 ರಂದು ಬರೆದ ಪತ್ರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮರುಬ್ರಾಂಡಿಂಗ್ ಯೋಜನೆಯ ಭಾಗವಾಗಿ ಹೆಸರು ಬದಲಾವಣೆಯ ಪ್ರಸ್ತಾವನೆ ನೀಡಿತ್ತು. ಡಿಸೆಂಬರ್ 31, 2023 ರೊಳಗೆ ಮರುನಾಮಕರಣದೊಂದಿಗೆ ಈ ಆರೋಗ್ಯ ಕೇಂದ್ರಗಳ ಛಾಯಾಚಿತ್ರಗಳನ್ನು ಸಲ್ಲಿಸುವಂತೆ ಕೇಳಿತ್ತು.
ಮರುನಾಮಕರಣ ನಿರ್ಧಾರದ ಅನುಷ್ಠಾನವು ಲಡಾಖ್ನಲ್ಲಿ, ವಿಶೇಷವಾಗಿ ಬೌದ್ಧರು ಬಹುಸಂಖ್ಯಾತವಾಗಿರುವ ಲೇಹ್ ಜಿಲ್ಲೆಯಲ್ಲಿ ಪ್ರಮುಖ ಧಾರ್ಮಿಕ ಗುಂಪುಗಳು ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ. ಆರೋಗ್ಯ ಕೇಂದ್ರಗಳಿಗೆ ಮರುನಾಮಕರಣ ಮಾಡಿರುವುದು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಟೀಕೆಗೆ ಕಾರಣವಾಗಿದೆ.
ಹಿಂದಿನ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ-ಬಿಜೆಪಿ ಸರ್ಕಾರದಲ್ಲಿ ಸಚಿವರೂ ಆಗಿದ್ದ ದೋರ್ಜಯ್ ಅವರು ದಿ ವೈರ್ನೊಂದಿಗೆ ಮಾತನಾಡುತ್ತಾ, ಈ ನಿರ್ಧಾರವು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. "ಇದು ನಮ್ಮ ವಿರುದ್ಧದ ಪಿತೂರಿ. ಆಸ್ಪತ್ರೆಗಳಿಗೆ ಮಂದಿರ ಎಂದು ಹೆಸರಿಡುವುದರಲ್ಲಿ ಏನು ಖುಷಿ ಸಿಗುತ್ತದೆ? ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಇದೊಂದು ಹೆಜ್ಜೆಯಾಗಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ನಿರ್ಧಾರದಿಂದ ಜನರು ಮನನೊಂದಿದ್ದಾರೆ ಎಂದು ಸಾಸ್ಪೋಲ್ ಕ್ಷೇತ್ರದ ಕೌನ್ಸಿಲರ್ ಸ್ಮಾನ್ಲಾ ಡೋರ್ಜೆ ನೂರ್ಬೂ ತಿಳಿಸಿದ್ದಾರೆ. "ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಲಭ್ಯವಿರಬೇಕು. ಆದರೆ ಈ ಕ್ರಮವು ಈ ಸೌಲಭ್ಯಗಳನ್ನು ಬಳಸಲು ಅಡೆತಡೆಗಳನ್ನು ಉಂಟುಮಾಡುತ್ತದೆ" ಎಂದು ಲಡಾಖ್ ನ ಯುವ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಸ್ಮಾನ್ಲಾ ಆರೋಪಿಸಿದ್ದಾರೆ.