ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಮೊದಲ ಹಂತದ ಕಾಮಗಾರಿ ಜನವರಿ 31ರೊಳಗೆ ಪೂರ್ಣಗೊಳ್ಳಲಿದೆ ಎಂದು ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶಕ ಎಚ್.ದಿನೇಶನ್ ತಿಳಿಸಿದರು.
ಕಾಸರಗೋಡು ಕಲೆಕ್ಟರೇಟ್ ಸಮ್ಮೇಳನ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ನಿರ್ಮಾಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಫೆಬ್ರವರಿ ಎರಡನೇ ವಾರದೊಳಗೆ ಚಿಕಿತ್ಸಾ ವಿಧಾನಗಳಿಗೆ ಅಗತ್ಯ ಸೌಕರ್ಯ ಹಾಗೂ ಪೀಠೋಪಕರಣಗಳನ್ನು ಸಿದ್ಧಪಡಿಸಿ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಿ ಉದ್ಘಾಟನೆಗೆ ಸಿದ್ಧಗೊಳಿಸಲಾಗುವುದು ಎಂದರು. ಅಗತ್ಯ ಚಿಕಿತ್ಸಕರ ಹುದ್ದೆಗಳನ್ನು ಗುರುತಿಸಿ ಜಿಲ್ಲಾ ಪಂಚಾಯಿತಿ ಸಹಕಾರದೊಂದಿಗೆ ನೇಮಕ ಮಾಡಲಾಗುವುದು ಎಂದರು. ಕ್ಲಿನಿಕಲ್ ಸೈಕಾಲಜಿ ಮತ್ತು ಹೈಡ್ರೊ ಥೆರಪಿ ಬ್ಲಾಕ್‍ಗಳ ನಿರ್ಮಾಣವು ಮೊದಲ ಹಂತದಲ್ಲಿ ಪೂರ್ಣಗೊಳ್ಳಲಿದ್ದು, ಇದು ರೂ.5 ಕೋಟಿ ಹೂಡಿಕೆಯಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಿಪ್ಮಾರ್ ಸಂಸ್ಥೆಯ ಪ್ರಸ್ತಾವನೆಯನ್ನು ಸ್ವೀಕರಿಸಿದ ನಂತರ, ಉರಾಲುಂಗಲ್ ಲೇಬರ್ ಕಾಂಟ್ರಾಕ್ಟ್ ಸೊಸೈಟಿ ಲಿಮಿಟೆಡ್‍ಗೆ ಪೀಠೋಪಕರಣ ಸೇರಿದಂತೆ ಚಿಕಿತ್ಸಾ ಸೌಲಭ್ಯಗಳನ್ನು ಸಿದ್ಧಪಡಿಸುವ ಕಾರ್ಯವನ್ನು ವಹಿಸಲಾಯಿತು. ಉದ್ಘಾಟನೆಯ ನಂತರ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪುನರ್ವಸತಿ ಗ್ರಾಮದಲ್ಲಿ ಚಿಕಿತ್ಸಾ ಸೌಲಭ್ಯಗಳು ದೊರೆಯಲಿವೆ ಎಮದರು.
ಸಾಮಾಜಿಕ ನ್ಯಾಯ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್. ಜಲಜಾ, ನಿಷ್ಮಾರ್ ಕಾರ್ಯನಿರ್ವಾಹಕ ನಿರ್ದೇಶಕ ಸಿ. ಚಂದ್ರಬಾಬು ಹಾಗೂ ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ.ಪಿ ರಾಜ್ ಮಾತನಾಡಿದರು. ಕೇರಳ ಸಾಮಾಜಿಕ ಭದ್ರತಾ ಆಯೋಗದ ಪ್ರತಿನಿಧಿಗಳು, ಯು.ಎಲ್.ಸಿ.ಸಿ.ಎಲ್ ಪ್ರತಿನಿಧಿಗಳು ಮೊದಲಾದವರು ಭಾಗವಹಿಸಿದ್ದರು.
ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕೆ ಭೇಟಿ:
ನಿರ್ಮಾಣ ಹಂತದಲ್ಲಿರುವ ಮುಳಿಯಾರ್ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕೆ ಸಾಮಾಜಿಕ ನ್ಯಾಯ ಇಲಾಖೆ ನಿರ್ದೇಶಕ ಎಚ್.ದಿನೇಶನ್, ಸಾಮಾಜಿಕ ನ್ಯಾಯ ಹೆಚ್ಚುವರಿ ನಿರ್ದೇಶಕಿ ಎಸ್.ಜಲಜಾ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ.ಪಿ.ರಾಜ್, ಕೆಎಸ್‍ಎಸ್‍ಎಂ ಪ್ರತಿನಿಧಿಗಳು ಮತ್ತು ನಿಷ್ಮಾರ್ ಪ್ರತಿನಿಧಿಗಳು ಭೇಟಿ ನೀಡಿದರು.