ಮೊಬೈಲ್ ಫೋನ್‌ರಹಿತ ಪ್ರಪಂಚವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆರಂಭದಲ್ಲಿ ಮೊಬೈಲ್ ಬಳಕೆ ಒಂದು ಹವ್ಯಾಸವಾಗಿ, ನಂತರ ಬಿಟ್ಟಿರಲಾರದ ಆಕರ್ಷಣೆಯಾಗಿ ಬಿಡುತ್ತದೆ. ಓದುವಾಗ ವಿದ್ಯಾರ್ಥಿಗಳನ್ನು ಅತಿಯಾಗಿ ಕಾಡುವುದು ಕೂಡ ಇದೇ. ಈ ಆಕರ್ಷಣೆಯಿಂದಾಗಿ, ಪುಸ್ತಕಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವಾಗುತ್ತದೆ.
ವಿದ್ಯಾರ್ಥಿಗಳು ಓದಿಗಾಗಿ ಗಾಳಿ, ಬೆಳಕು, ಶಾಂತ ವಾತಾವರಣವನ್ನು ಹೊಂದಿರುವ ಸ್ಥಳವನ್ನು ಆಯ್ದುಕೊಂಡರೆ ಸಾಕಾಗದು. ಏಕಾಗ್ರತೆಯೂ ಬೇಕು. ಓದಿನ ಸಮಯದಲ್ಲಿ ಮೊಬೈಲ್ ಅನ್ನು ದೂರವಿಡಲು ದೃಢ ಸಂಕಲ್ಪ ಮಾಡಿದ್ದರೂ, ಆಗಾಗ ಬರುವ ಕರೆಗಳು ಹಾಗೂ ಸಂದೇಶಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಇದು ಅಧ್ಯಯನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೊಬೈಲ್ ಅನ್ನು ಬಿಟ್ಟುಬಿಡುವುದು ಸುಲಭವಲ್ಲ. ಸಾಧುವೂ ಅಲ್ಲ. ಬದಲಿಗೆ, ಅದು ವಿದ್ಯಾರ್ಥಿಯ ಓದನ್ನು ವಿಚಲಿತಗೊಳಿಸದಂತೆ ನಿಭಾಯಿಸುವುದು ಜಾಣತನ. ಅದಕ್ಕೆ ಬೇಕಿರುವುದು ಇಚ್ಛಾಶಕ್ತಿ ಮತ್ತು ಸ್ವಯಂ ನಿಯಂತ್ರಣ. ಹಾಗಾಗಿ, ಓದುವ ಸಮಯದಲ್ಲಿ, ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡುವುದು, ಕೈಗೆ ಸಿಗದಂತೆ ದೂರ ಇರಿಸುವುದು, ಇಟ್ಟುಕೊಳ್ಳಲೇ ಬೇಕಾದ ಅನಿವಾರ್ಯ ಇದ್ದಲ್ಲಿ, ಏರೋಪ್ಲೇನ್ ಮೋಡ್‌ನಲ್ಲಿ ಇರಿಸುವುದು, ಮೊಬೈಲ್ ಪರದೆಯ ಬೆಳಕು ವಿಚಲಿತಗೊಳಿಸದಂತೆ ಅದನ್ನು ತಲೆಕೆಳಗಾಗಿ ಇಡುವಂತಹ ಕ್ರಮಗಳನ್ನು ರೂಢಿಸಿಕೊಳ್ಳಬಹುದು.
ಇವುಗಳು ಸಾಧ್ಯವಾಗದಿದ್ದರೆ, ಚಿಂತೆ ಬೇಡ. ಮೊಬೈಲ್‌ನ ಅತಿಯಾದ ಬಳಕೆಯನ್ನು ನಿರ್ಬಂಧಿಸುವ ಮೂಲಕ, ವಿಚಲಿತರಾಗದೇ ಓದನ್ನು ಮುಂದುವರಿಸಲು ಹಾಗೂ ಸ್ವಯಂ ನಿಯಂತ್ರಣದ ಕೊರತೆಯಿಂದ ವಿದ್ಯಾರ್ಥಿಗಳು ಅನಗತ್ಯ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಲು ಕೆಲವು ಆ್ಯಪ್‌ಗಳಿವೆ.
ಫಾರೆಸ್ಟ್ : ಓದಿನ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಫಾರೆಸ್ಟ್ ಒಂದು ಅತ್ಯುತ್ತಮ ಆ್ಯಪ್. ಇದರಲ್ಲಿ ನಿಮ್ಮ ಓದಿನ ಸಮಯವನ್ನು ಟೈಮರ್‌ಗೆ ಹೊಂದಿಸಬಹುದು. ಇದರಲ್ಲೊಂದು ಸಾಮಾಜಿಕ ಕಾರ್ಯವೂ ಇದೆ. ನೀವು ಆ್ಯಪ್ ಬಳಸಿದಾಗ, ಮರಗಳನ್ನು ನೆಡುವುದಕ್ಕೆ ಕಾರಣವಾಗುತ್ತೀರಿ! ಟೈಮರ್ ಅವಧಿಗಿಂತ ಮೊದಲೇ ನೀವು ಫೋನನ್ನು ಉಪಯೋಗಿಸಿದರೆ, ಮರ ಸಾಯುತ್ತದೆ. ನಿರ್ಬಂಧಿತ ಸಮಯದಲ್ಲಿ ನೀವು ಫೋನನ್ನು ಬಳಸದಿದ್ದರೆ, ನಿಮಗೆ ವರ್ಚುವಲ್ ನಾಣ್ಯಗಳು ದೊರೆಯುತ್ತದೆ. ಅದನ್ನು ನೀವು ಫಾರೆಸ್ಟ್ ಆ್ಯಪ್‌ನ ಪಾಲುದಾರಿಕೆ ಸಂಸ್ಥೆಗೆ ನೀಡಿದರೆ, ಆ ಸಂಸ್ಥೆ ನಿಮ್ಮ ಹೆಸರಲ್ಲಿ ಮರವನ್ನು ನೆಡುತ್ತದೆ. ಕಾಲಾಂತರದಲ್ಲ್ಲಿ ನೀವು ಒಂದು ಅರಣ್ಯವನ್ನೇ ಬೆಳೆಸುತ್ತೀರಿ.
ಲೀಚ್ ಬ್ಲಾಕ್ : ಈ ಆ್ಯಪ್‌ನಲ್ಲಿ ಹಲವಾರು ಆಯ್ಕೆಗಳಿವೆ. ನೀವು ನಿಗದಿತ ಜಾಲತಾಣಗಳನ್ನು ನಿರ್ಬಂಧಿಸಬಹುದು ಅಥವಾ ನಿರ್ಧಿಷ್ಟ ಸಮಯದಲ್ಲಿ ಮಾತ್ರ ಆ್ಯಪ್‌ಗಳು ಲಭ್ಯವಾಗುವಂತೆ ಸಂಯೋಜಿಸಬಹುದು. ಉದಾಹರಣೆಗೆ ಮುಂಜಾನೆ 6 ರಿಂದ 8ರವರೆಗೆ ಓದುತ್ತೀರಿ, ಆ ಬಳಿಕ ಮದ್ಯಂತರದಲ್ಲಿ 10 ನಿಮಿಷ ವಾಟ್ಸಾಪ್, ಫೇಸ್‌ಬುಕ್ ನೋಡಲು ಬಯಸುತ್ತೀರಿ ಎಂದಿಟ್ಟುಕೊಳ್ಳೋಣ. ಅದನ್ನು ಹಾಗೇ ಸೆಟ್ ಮಾಡಲು ಅವಕಾಶವಿದೆ. ಆ ಹತ್ತು ನಿಮಿಷಗಳ ನಂತರ ಹಿಂದೆ ನಿರ್ಧರಿಸಿದ್ದ ನಿರ್ಬಂಧಗಳು ಮುಂದುವರಿಯುತ್ತವೆ.
ಸೆಲ್ಫ್ ಕಂಟ್ರೋಲ್ : ಉಳಿದವುಗಳಿಗಿಂತ ಭಿನ್ನವಾಗಿರುವ ಈ ಆ್ಯಪ್. ಒಮ್ಮೆ ನಿರ್ಬಂಧನೆಯನ್ನು ಸೆಟ್ ಮಾಡಿದನಂತರ, ಅದನ್ನು ಅಳಿಸಿಹಾಕಲು ಸಾಧ್ಯವೇ ಇಲ್ಲ (ಮ್ಯಾಕೋಸ್ ಅನ್ನು ಸಂಪೂರ್ಣವಾಗಿ ಮರುಸ್ಥಾಪಿಸುವುದನ್ನು ಬಿಟ್ಟು). ಹಾಗಾಗಿ ಇದು ಕಟ್ಟು ನಿಟ್ಟಿನ ಓದನ್ನು ಪ್ರತಿಪಾದಿಸುತ್ತದೆ. ಆಗಾಗ್ಗೆ ಮೊಬೈಲ್ ಅನ್ನು ಉಪಯೋಗಸಲು ವಿಚಲಿತರಾಗುವವರಿಗೆ ಇದು ಹೇಳಿ ಮಾಡಿಸಿದ್ದು.
ಪಾವ್ ಬ್ಲಾಕ್ : ಈ ಆ್ಯಪ್‌ನಲ್ಲಿ, ಓದಿಗಾಗಿ ನೀವು ನಿರ್ಧರಿಸಿರುವ ಅವಧಿಯಲ್ಲಿ ಜಾಲತಾಣಗಳಿಗೆ ಭೇಟಿ ನೀಡಿದರೆ, ದುಃಖದಲ್ಲಿರುವ ಪ್ರಾಣಿಯ ಚಿತ್ರವನ್ನು ನಿಮಗೆ ತೋರಿಸಲಾಗುತ್ತದೆ. ಮುಂದುವರಿಯಲು ಅಥವಾ ತೊರೆಯಲು ಕೆಲವು ಸೆಕೆಂಡುಗಳ ಕಾಲ ಸಮಯ ನೀಡಲಾಗುತ್ತದೆ. ನೀವು ಜಾಲತಾಣವನ್ನು ತೊರೆಯಲು ನಿರ್ಧರಿಸಿದರೆ, ಸಂತೋಷದ ಪ್ರಾಣಿಯ ಚಿತ್ರವನ್ನು ನೋಡುತ್ತೀರಿ. ಇದು ಮಾನಸಿಕವಾಗಿ ನೀವು ಓದಿನ ಸಮಯದಲ್ಲಿ ಜಾಲತಾಣಗಳಿಗೆ ಭೇಟಿಕೊಡುವುದನ್ನು ತಡೆಯುತ್ತದೆ.
ಹೆಲ್ಪ್ ಮೀ ಫೋಕಸ್ : ಈ ಆ್ಯಪ್ ಕೂಡ ನಿಗದಿತ ಸಮಯದಲ್ಲಿ ಮೊಬೈಲ್ ಫೋನ್ ನಿಮ್ಮ ಏಕಾಗ್ರತೆಗೆ ಭಂಗ ಬರದಂತೆ ತಡೆಯುತ್ತದೆ. ಒಂದು ವೇಳೆ ನಡುವಲ್ಲಿ ನೀವು ಫೋನನ್ನು ಕೈಗೆತ್ತಿಕೊಂಡರೆ, ನಿಮ್ಮ ಗಮನವನ್ನು ಕೇಂದ್ರೀಕರಿಸಲು ಪ್ರೇರೇಪಿಸುವ ನುಡಿಗಟ್ಟುಗಳನ್ನು ಪ್ರದರ್ಶಿಸುತ್ತದೆ.
ಬ್ರೇಕ್ ಫ್ರೀ : ಅಧ್ಯಯನ ಸಮಯದಲ್ಲಿ ಇಂಟರ್ನೆಟ್‌ಗೆ ನಿಮ್ಮ ಪ್ರವೇಶವನ್ನು ನೇರವಾಗಿ ನಿರ್ಬಂಧಿಸುವ ಈ ಆ್ಯಪ್, ನೀವು ಪ್ರತಿಯೊಂದು ಆ್ಯಪ್‌ಗಳನ್ನು ಬಳಸಿದ ಸಮಯದ ವಿವರ ಹಾಗೂ ಎಚ್ಚರಿಕೆಯನ್ನೂ ನೀಡುತ್ತದೆ. ಜೊತೆಗೆ, ನಿರ್ಬಂಧಿತ ಅವಧಿಯಲ್ಲಿ ಬರುವ ಕರೆಗಳಿಗೆ ನೀವು ಪ್ರಸ್ತುತ ಕಾರ್ಯನಿರತರಾಗಿದ್ದೀರಿ ಎಂಬ ಸ್ವಯಂಪ್ರೇರಿತ ಸಂದೇಶವನ್ನೂ ಕಲಿಸುತ್ತದೆ.
ಈ ಆ್ಯಪ್‌ಗಳನ್ನು ವಿದ್ಯಾರ್ಥಿಗಳಷ್ಟೇ ಅಲ್ಲದೇ ಮೊಬೈಲ್‌ನ ಅತಿಯಾದ ಬಳಕೆಯನ್ನು ನಿಯಂತ್ರಿಸಬಯಸುವವರೂ ಬಳಸಬಹುದು.