ಕಣ್ಣೂರು: ಪ್ರಾಧ್ಯಾಪಕನ ಕೈಹಸ್ತ ಕಡಿದು ತುಂಡರಿಸಿದ ಭೀಕರ ಕೃತ್ಯವೆಸಗಿದ ಪ್ರಕರಣದ ಪ್ರಮುಖ ಆರೋಪಿ ಸವಾದ್ ಕೈಕಡಿಯಲು ಬಳಸಿದ್ದ ಕೊಡಲಿ ಪತ್ತೆಹಚ್ಚಲು ಎನ್‍ಐಎ ಅಧಿಕಾರಿಗಳು ಶ್ರಮ ಆರಂಭಿಸಿದ್ದಾರೆ. ಕೈಹಸ್ತ ತುಂಡರಿಸಲು ಬಳಸಿದ್ದ ಕೊಡಲಿಯನ್ನು ಸವಾದ್ ಕೊಂಡೊಯ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ಸವಾದ್‍ನನ್ನು ಬಂಧಿಸಲಾದ ಪ್ರದೇಶ ಪಿಎಫ್‍ಐ ಶಕ್ತಿಕೇಂದ್ರವಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. 13ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಸವಾದ್‍ಗೆ ಇಷ್ಟು ವರ್ಷಗಳ ಕಾಲ ತಲೆಮರೆಸಿಕೊಂಡು ಜೀವನ ನಡೆಸಲು ಯಾರೆಲ್ಲಾ ಸಹಾಯ ಒದಗಿಸಿದ್ದಾರೆ, ಇವನಿಗೆ ವಾಸ್ತವ್ಯಕ್ಕೆ ಸ್ಥಳಾವಕಾಶ ಒದಗಿಸಿದವರ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜತೆಗೆ ಸವಾದ್‍ಗೆ ಸಹಾಯಮಾಡಿರುವ ನಿಷೇಧಿತ ಪಿಎಫ್‍ಐ ಸಂಘಟನೆ ಕಾರ್ಯಕರ್ತರನ್ನು ಕೇಂದ್ರೀಕರಿಸಿ ಎನ್‍ಐಎ ತನಿಖೆ ಮುಂದುವರಿಸಿದೆ. ಪಿಎಫ್‍ಐ ಮೇಲೆ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಸವಾದ್‍ಗೆ ಫಂಡ್ ಲಭಿಸದಾದಾಗ ಕೊನೆ ಹಂತದಲ್ಲಿ ಮರದ ಕೆಲಸಕ್ಕೆ ಸವಾದ್ ಹೊರಟಿದ್ದಾನೆ. ಸವಾದ್ ತನ್ನ ಹೆಸರನ್ನು ಶಾಜಹಾನ್ ಎಂದು ಬದಲಾಯಿಸಿ, ಸುಳ್ಳು ವಿಳಾಸವನ್ನೂ ನೀಡಿ ಕಾಸರಗೋಡಿನ ಯುವತಿಯನ್ನು ಮದುವೆಯಾಗಿದ್ದಾನೆ.
ಪಿಎಫ್‍ಐ ಕಾರ್ಯಕರ್ತ:
ಸವಾದ್ ಎಸ್‍ಡಿಪಿಐ, ಪಾಪ್ಯುಪರ್ ಫ್ರಂಟ್ ಮುಂಡರ ಜತೆ ನಿರಂತರ ಸಂಪರ್ಕವಿರಿಸಿಕೊಂಡಿರುವುದನ್ನೂ ಪತ್ತೆಹಚ್ಚಲಾಗಿದ್ದು, ಈತನಿಗೆ ತಲೆಮರೆಸಿಕೊಂಡು ಜೀವಿಸಲು ಸೌಕರ್ಯ ಒದಗಿಸಿಕೊಟ್ಟವರನ್ನು ಪತ್ತೆಹಚ್ಚಲು ಎನ್‍ಐಎ ತನಿಖೆ ಮುಂದುವರಿಸಿದೆ.
13ವರ್ಷಗಳ ಕಾಲ ಕೇರಳದ ಕಣ್ಣೂರಿನಲ್ಲಿ ತಲೆಮರೆಸಿಕೊಂಡು ಜೀವನ ನಡೆಸುತ್ತಿದ್ದರೂ, ಕೇರಳ ಪೊಲೀಸರಿಗೆ ಈತನನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಕೇರಳ ಪೊಲೀಸರ ಇಂಟೆಲಿಜೆನ್ಸ್ ವೈಫಲ್ಯ ಎತ್ತಿ ತೋರಿಸುತ್ತಿರುವುದಾಗಿ ರಾಜ್ಯದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳನ್ನು ನ್ಯಾಯಾಲಯ ಶಿಕ್ಷೆಗೊಳಪಡಿಸಿದ ನಂತರ ಪ್ರಮುಖ ಆರೋಪಿ ಸವಾದ್‍ನನ್ನು ಬಂಧಿಸಲಾಗಿದೆ. ಸವಾದ್ ಕಟ್ಟಾ ಮೂಲಭೂತವಾದಿಯಾಗಿದ್ದು, ಎನ್‍ಡಿಎಪ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದನು. ಕೊಚ್ಚಿಯ ಪೀಠೋಪಕರಣ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈತ 2010ರಲ್ಲಿ ಪ್ರಾಧ್ಯಾಪಕ ಪ್ರೊ. ಟಿ.ಜೆ ಜೋಸೆಫ್ ಕೈಹಸ್ತ ಕಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಗುರುತಿಸಿಕೊಂಡಿದ್ದನು.