ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷಗಳ ಸಭೆಗೆ ವಿವಿಧ ಪಕ್ಷಗಳ ಸದನದ ನಾಯಕರು ಹಾಜರಾಗಿದ್ದರು.
ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಭೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಿದ್ದರು.
ಸಂಸತ್ ಭವನದ ಸಂಕೀರ್ಣದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ನ ಕೆ.ಸುರೇಶ್, ಟಿಎಂಸಿಯ ಸುದೀಪ್ ಬಂದೋಪಾಧ್ಯಾಯ, ಡಿಎಂಕೆಯ ಟಿ.ಆರ್. ಬಾಲು, ಶಿವಸೇನೆಯ ರಾಹುಲ್ ಶೆವಾಲೆ, ಸಮಾಜವಾದಿ ಪಕ್ಷದ ಎಸ್‌ಟಿ ಹಸನ್, ಜೆಡಿಯುನ ರಾಮ್ ನಾಥ್ ಠಾಕೂರ್ ಮತ್ತು ಟಿಡಿಪಿಯ ಜಯದೇವ್ ಗಲ್ಲಾ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಿದ್ದರು.
ಪ್ರತಿ ಅಧಿವೇಶನಕ್ಕೂ ಮುನ್ನ ವಿವಿಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸುವ ವಿಷಯಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಸಭೆ ಕರೆಯುವುದು ವಾಡಿಕೆಯಾಗಿದೆ. ಸರ್ಕಾರವು ತನ್ನ ಕಾರ್ಯಸೂಚಿಯ ಬಗ್ಗೆ ಅವರಿಗೆ ತಿಳಿಸಿ, ಅವರ ಸಹಕಾರವನ್ನು ಕೋರುತ್ತದೆ.
ಬಜೆಟ್ ಅಧಿವೇಶನವು ಈ ಬಾರಿ ಜನವರಿ 31ರಿಂದ ಫೆಬ್ರವರಿ 9ರ ನಡುವೆ ನಡೆಯಲಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಅಧಿವೇಶನ ಆರಂಭವಾಗಲಿದೆ.
ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ.