ಕಾಸರಗೋಡು: ತ್ರಿಕರಿಪುರ ಗ್ರಾಮ ಪಂಚಾಯಿತಿ ಜಾಗೃತ ಸಮಿತಿ ಹಾಗೂ ವಿಮುಕ್ತಿ ಮಿಷನ್ ವತಿಯಿಂದ ಮಾದಕ ವಸ್ತು ವಿರೋಧಿ ಚರ್ಚಾ ಸಭೆ ತ್ರಿಕ್ಕರಿಪುರದಲ್ಲಿ ಆಯೋಜಿಸಲಾಗಿತ್ತು. ಮಾದಕವಸ್ತು ಬಳಕೆಯಿಂದ ಉಂಟಾಗುತ್ತಿರುವ ಹಾನಿಯ ಬಗ್ಗೆ ಜನರಲ್ಲಿ ಜಾಗೃತಿಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಬಕಾರಿ ಉಪ ಆಯುಕ್ತ ಪಿ.ಕೆ.ಜಯರಾಜ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾದಕವಸ್ತು ಬಳಕೆಯನ್ನು ತೊಡೆದುಹಾಕಲು ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ಪಣತೊಡಬೇಕು ಎಂದು ತಿಳಿಸಿದರು. ತೃಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಕೆ.ಬಾವಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷೆ ಆನಂದವಲ್ಲಿ, ಪಂಚಾಯಿತಿ ಸದಸ್ಯರಾದ ಕೆ.ವಿ.ಕಾತ್ರ್ಯಾಯನಿ, ಇ.ಶಶಿಧರನ್ ಉಪಸ್ಥಿತರಿದ್ದರು. ಪಂಚಾಯಿತಿ ವ್ಯಾಪ್ತಿಯ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಸ್ವಯಂಸೇವಕರು ಭಾಗವಹಿಸಿದ್ದರು. ಈ ಸಂದರ್ಭ ಸಂವಾದ ಕಾರ್ಯಕ್ರಮ ನಡೆಯಿತು. ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು, ವಾರ್ಡ್ ಅಲರ್ಟ್‍ಸಮಿತಿಯ ಸದಸ್ಯರು, ಮುಖಂಡರು, ಇತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಐಸಿಡಿಎಸ್ ಮೇಲ್ವಿಚಾರಕಿ ಎಂ.ಲೈಲಾ ಸ್ವಾಗತಿಸಿದರು. ವಿಮುಕ್ತಿ ಮಾರ್ಗದರ್ಶಕ ಪಿ.ಗೋವಿಂದನ್ ವಂದಿಸಿದರು.