HEALTH TIPS

ಮಾನಸಿಕ ಒತ್ತಡದಿಂದ ದೇಹದ ಮೇಲಾಗುವ ಪರಿಣಾಮ, ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

 ತ್ತಡವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಹಾಗಾಗಿ ಒತ್ತಡದಿಂದಾಗುವ ಅನುಭವವೂ ಭಿನ್ನವಾಗಿಯೇ ಇರುತ್ತದೆ. ಯಾವುದೇ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಕಷ್ಟವೆನಿಸಿದಾಗ ಗಾಬರಿ, ಕಿರಿಕಿರಿಯಾಗುತ್ತದೆ. ಇದನ್ನೇ ಒತ್ತಡದ ಸ್ಥಿತಿ ಎನ್ನಬಹುದು. ಸವಾಲು, ಸಂಕಟ, ಅಪಾಯದ ಸನ್ನಿವೇಶಗಳನ್ನು ಎದುರಿಸುವಾಗೆಲ್ಲ ಒತ್ತಡದ ಸ್ಥಿತಿ ಉಂಟಾಗುತ್ತದೆ.

ಒಂದು ಹಂತದವರೆಗೆ ಒತ್ತಡವು ನಮ್ಮನ್ನು ಸಾಂದರ್ಭಿಕವಾಗಿ ಕಾರ್ಯೋನ್ಮುಖರಾಗಲು ಪ್ರಚೋದಿಸುತ್ತದೆ. ಅದು ಹೆಚ್ಚಾದಾಗ ಹೆದರಿಕೆಯಾಗುವುದು ಸಹಜ. ಹೃದಯಬಡಿತದಲ್ಲಿ ಏರುಪೇರು, ಬಾಯಿ ಒಣಗುವುದು, ಬೆವರುವುದೆಲ್ಲ ಮಾಮೂಲು.

ಅಪಘಾತ, ಆತ್ಮೀಯರ ಸಾವು, ನಾವು ಗೌರವಿಸುವ ವ್ಯಕ್ತಿಗಳ ಅನಿರೀಕ್ಷಿತ ನಡವಳಿಕೆ, ನಮ್ಮದೇ ಆರೋಗ್ಯದ ಸಮಸ್ಯೆ, ಆಸ್ತಿ ಕಳೆದುಕೊಳ್ಳುವುದು, ಆರ್ಥಿಕ ನಷ್ಟ, ನಿಯಂತ್ರಣ ಮೀರಿದ ಸನ್ನಿವೇಶಗಳು ಇವುಗಳಿಂದ ಒತ್ತಡ ಉಂಟಾಗುವುದು ಸಹಜ. ಇವೆಲ್ಲವೂ ಅಲ್ಪಾವಧಿಗೆ ಸೀಮಿತವಾಗಿರುವ ಒತ್ತಡಗಳು. ಈ ಒತ್ತಡ ದೀರ್ಘಕಾಲ ಉಳಿದುಬಿಟ್ಟರೆ ದೇಹ ಹಾಗೂ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ.

ಅತಿಯಾದ ಒತ್ತಡದ ಪರಿಣಾಮಗಳೇನು?

ಒತ್ತಡವೆಂಬುದು ಕೇವಲ ಮನಸ್ಸಿಗೆ ಸಂಬಂಧಿಸಿದ್ದಲ್ಲ. ಹೊರಗಿನ ಭಯಕ್ಕೆ ದೇಹವೂ ಪ್ರತಿಕ್ರಿಯಿಸುತ್ತದೆ. ಇದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಏರುತ್ತದೆ. ಉಸಿರಾಟ, ನಾಡಿ ಮಿಡಿತ ಹೆಚ್ಚುತ್ತದೆ.

ಅಡ್ರೆನಾಲಿನ್ ಮತ್ತು ಕಾರ್ಟಿಸೋಲ್ ಹಾರ್ಮೋನುಗಳು ಹೆಚ್ಚಿನ ಮಟ್ಟದಲ್ಲಿ ಬಿಡುಗಡೆಯಾಗಿ ದೀರ್ಘಕಾಲದ ಆರೋಗ್ಯ ಸಮಸ್ಯೆ ತಂದೊಡ್ಡಬಹುದು. ದೀರ್ಘಕಾಲೀನ ಒತ್ತಡದಿಂದ ಉಂಟಾಗುವ ಪ್ರಮುಖ ತೊಂದರೆಗಳೆಂದರೆ:

ಹೃದ್ರೋಗ: ಒತ್ತಡದಿಂದ ಹೃದಯದ ಬಡಿತ, ನಾಡಿಮಿಡಿತ ಹೆಚ್ಚಾಗಿ ಕೊಲೆಸ್ಟರಾಲ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದ್ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ದೀರ್ಘಕಾಲದ ಹೃದ್ರೋಗದಿಂದ ಬಳಲುತ್ತಿರುವವರು ಆಘಾತಕಾರಿ ಒತ್ತಡಗಳಿಂದ ದೂರವಿರುವುದು ಒಳಿತು.

ಆಸ್ತಮಾ: ಒತ್ತಡದಿಂದ ಆಸ್ತಮಾ ಇರುವವರ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಹೊರಗಿನ ಒತ್ತಡಗಳಿಂದ ದೇಹದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು.

ಬೊಜ್ಜು: ಅತಿ ಹೆಚ್ಚು ಒತ್ತಡಕ್ಕೆ ಒಳಗಾದರೆ ಕಾರ್ಟಿಸೋಲ್‌ ಹಾರ್ಮೋನಿನ ಉತ್ಪಾದನೆ ಹೆಚ್ಚುತ್ತದೆ. ಇದರಿಂದ ಉದರದಲ್ಲಿ ಹೆಚ್ಚು ಕೊಬ್ಬು ಸಂಗ್ರಹವಾಗುತ್ತದೆ. ಕಾಲು ಅಥವಾ ತೊಡೆಗಳಿಗಿಂತ ಉದರದಲ್ಲಿ ಸೇರುವ ಕೊಬ್ಬಿನಿಂದ ಆರೋಗ್ಯದ ಮೇಲೆ ಪರಿಣಾಮ ಹೆಚ್ಚು.

ಸಕ್ಕರೆ ಕಾಯಿಲೆ: ಮಧುಮೇಹದಿಂದ ಬಳಲುವವರು ಹೆಚ್ಚಿನ ಒತ್ತಡಕ್ಕೆ ಈಡಾಗುವುದರಿಂದ ಅದನ್ನು ಮರೆಯಲು ಆಹಾರದ ಮೊರೆ ಹೋಗುತ್ತಾರೆ. ಜಂಕ್‌ಫುಡ್‌ಗಳ ಅತಿಯಾದ ಸೇವನೆಯಿಂದ ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಿ ಮಧುಮೇಹದ ತೊಂದರೆ ಹೆಚ್ಚುತ್ತದೆ.

ಖಿನ್ನತೆ ಮತ್ತು ಆತಂಕ: ಒತ್ತಡದಿಂದ ಆತಂಕದ ಜತೆ ಖಿನ್ನತೆ ಉಂಟಾಗುತ್ತದೆ. ಒತ್ತಡದ ಕೆಲಸ ಮಾಡುವವರು ಬಹುಬೇಗ ಖಿನ್ನತೆಗೆ ಜಾರುತ್ತಾರೆ ಎನ್ನುತ್ತದೆ ಅಧ್ಯಯನದ ವರದಿಗಳು. ಅತಿ ಒತ್ತಡವನ್ನು ನಿಭಾಯಿಸಲು ಆಗದೆ ಮೆದುಳು ನೆನಪಿನ ಶಕ್ತಿ ಕಳೆದುಕೊಳ್ಳಬಹುದು. ಆಲ್ಜಿಮರ್ಸ್‌ ಕಾಯಿಲೆ ಉಂಟಾಗಬಹುದು.

ಜೀರ್ಣಕ್ಕೂ ತೊಂದರೆ: ಅತಿ ಒತ್ತಡದಿಂದ ಹೊಟ್ಟೆಹುಣ್ಣು ಹೊಸದಾಗಿ ಉಂಟಾಗದೇ ಇದ್ದರೂ ಈಗಾಗಲೇ ಆಯಸಿಡಿಟಿ ಸಮಸ್ಯೆ ಇರುವವರಿಗೆ ಒತ್ತಡ ತೆಗೆದುಕೊಂಡರೆ ಸಮಸ್ಯೆ ಹೆಚ್ಚುತ್ತದೆ. ಒತ್ತಡದಿಂದ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳಬಹುದು.

ನಿರ್ವಹಣೆ ಹೇಗೆ?

ಒತ್ತಡವನ್ನು ನಿಭಾಯಿಸುವುದು ಒಂದು ಕಲೆ. ನಿಮಗಿರುವ ಒತ್ತಡ, ಆತಂಕಗಳನ್ನು ಒಂದು ಕಡೆ ಬರೆಯುತ್ತಾ ಸ್ಪಷ್ಟತೆ ತಂದುಕೊಳ್ಳಿ. ಯಾವುದೇ ಕೆಲಸ ಮಾಡುವ ಮುನ್ನ ಪೂರ್ವ ತಯಾರಿಯ ಕಡೆಗೆ ಗಮನ ಕೊಡಿ. ಇದರಿಂದ ಒತ್ತಡದ ಹೊರೆ ಕಡಿಮೆಯಾಗುತ್ತದೆ.

ಬಾಹ್ಯ ಪ್ರಚೋದನೆಗಿಂತ ಆಂತರಿಕ ಪ್ರಚೋದನೆಗೆ ಪ್ರಾಮುಖ್ಯತೆ ಕೊಡಿ. ಬದುಕು ಕೇವಲ ಪ್ರತಿಕ್ರಿಯೆಗಷ್ಟೆ ಸೀಮಿತವಲ್ಲವೆಂಬುದನ್ನು ಅರಿಯಿರಿ. ಭೂತ, ಭವಿಷ್ಯದ ಕಡೆಗೆ ಗಮನ ಕೊಡದೇ ವರ್ತಮಾನದಲ್ಲಿ ಬದುಕಿ. ನಿಯಮಿತ ಯೋಗ, ಧ್ಯಾನ, ಪ್ರಾಣಾಯಾಮ ಸೇರಿ ಆರೋಗ್ಯಕರ ಜೀವನಶೈಲಿಯಿಂದ ಒತ್ತಡರಹಿತ ಬದುಕನ್ನು ನಿಮ್ಮದಾಗಿಸಿಕೊಳ್ಳಬಹುದು.

ಒತ್ತಡವೂ ಉಪ್ಪಿನಂತೆ

ಊಟಕ್ಕೆ ಉಪ್ಪಿನ ರುಚಿ ಇರುವ ಹಾಗೇ ಒತ್ತಡವು ಬದುಕಿಗೆ ಬೇಕು. ಇಲ್ಲದೇ ಇದ್ದರೆ ಜೀವನ ಸಪ್ಪೆಯಾಗಿ ಬಿಡುತ್ತದೆ. ಕಲಿಯಲು, ಬೆಳೆಯಲು ಒತ್ತಡದ ಅಗತ್ಯವಿರುತ್ತದೆ. ಯಾವುದೇ ಜವಾಬ್ದಾರಿಯನ್ನು ಜವಾಬ್ದಾರಿಯಾಗಿ ನೋಡದೇ ಅದನ್ನು ಪ್ರೀತಿಸಲು ಆರಂಭಿಸಿದ ಕ್ಷಣವೇ ಒತ್ತಡವೆಂಬುದು ಕರಗುತ್ತದೆ. ಮೊದಲ ಬಾರಿಗೆ ಶಾಲೆಗೆ ಹೋಗುವಾಗ, ಬ್ಯಾಪಾರ ಆರಂಭಿಸುವಾಗ, ಉದ್ಯೋಗ ಸೇರುವಾಗ ಹೀಗೆ ಎಲ್ಲ ಮೊದಲ ಹಂತಗಳಲ್ಲಿಯೂ ಒತ್ತಡ ಸಾಮಾನ್ಯವೆಂಬುದನ್ನು ಅರಿಯಬೇಕಿದೆ. ನಮ್ಮನ್ನು ಕ್ರಿಯಾಶೀಲರಾಗಿಡಲು ಒತ್ತಡದ ಅಗತ್ಯವಿದೆ. ಸಾಮರ್ಥ್ಯ ಅರಿತು ಹೆಜ್ಜೆ ಹಾಕಿದರೆ ಒತ್ತಡವನ್ನು ನಿಭಾಯಿಸುವುದು ಬಲು ಸುಲಭ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries