ನವಿ ಮುಂಬೈ: ಧ್ವನಿ ಸಂಬಂಧಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ (ಸ್ಪಾಸ್ಮೊಡಿಕ್ ಡಿಸ್ಫೋನಿಯಾ) 48 ವರ್ಷದ ಮಹಿಳೆಯೊಬ್ಬರಿಗೆ ಇಲ್ಲಿನ ಮೆಡಿಕವರ್ ಆಸ್ಪತ್ರೆಯ ಕಿವಿ, ಗಂಟಲು ತಜ್ಞರಾದ ಡಾ. ಫರಾ ನಾಜ್ ಕಾಝಿ ನೇತೃತ್ವದ ವೈದ್ಯರ ತಂಡ ನೀಡಿದ ಚಿಕಿತ್ಸೆಯ ಪರಿಣಾಮವಾಗಿ, ಮಹಿಳೆಗೆ ಎರಡು ವರ್ಷಗಳ ಬಳಿಕ ಧ್ವನಿ ಮರಳಿ ಲಭಿಸಿದೆ.
ಧ್ವನಿಯಲ್ಲಿ ವ್ಯತ್ಯಾಸವಾಗಿರುವುದು ಎರಡು ವರ್ಷಗಳ ಹಿಂದೆ ರೋಗಿಯ ಗಮನಕ್ಕೆ ಬಂದಿತ್ತು. ದಿನದಿಂದ ದಿನಕ್ಕೆ ಅವರ ಧ್ವನಿಯು ಸ್ಪಷ್ಟತೆ ಕಳೆದುಕೊಳ್ಳುತ್ತಿತ್ತು. ಹಲವು ಮಂದಿ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಎರಡು ತಿಂಗಳ ಹಿಂದೆ ಅವರು ಚಿಕಿತ್ಸೆಗಾಗಿ ಮೆಡಿಕವರ್ ಆಸ್ಪತ್ರೆಗೆ ಬಂದಿದ್ದರು ಎಂದು ಮೂಲಗಳು ಹೇಳಿವೆ.
ಸ್ಪಾಸ್ಮೊಡಿಕ್ ಡಿಸ್ಫೋನಿಯಾವು ನರ ಸಂಬಂಧಿ ರೋಗವಾಗಿದ್ದು, ಇದು ಧ್ವನಿ ಪೆಟ್ಟಿಗೆಯ ಸ್ನಾಯುಗಳ ಸೆಳೆತಕ್ಕೆ ಕಾರಣವಾಗುತ್ತದೆ ಮತ್ತು ಸ್ವಷ್ಟವಾಗಿ ಮಾತನಾಡಲು ಸಾಧ್ಯವಾಗದ ಸ್ಥಿತಿ ಉಂಟಾಗುತ್ತದೆ ಎಂದು ಡಾ. ಫರಾ ನಾಜ್ ತಿಳಿಸಿದ್ದಾರೆ.
ರೋಗಿಗೆ ಎಲೆಕ್ಟ್ರೋಮೋಗ್ರಫಿ (ಇಎಂಜಿ) ನಿರ್ದೇಶಿತ ಬೊಟೊಕ್ಸ್ ಚಿಕಿತ್ಸೆ ನೀಡಲಾಗಿದೆ. ಸ್ನಾಯು ಸೆಳೆತಕ್ಕೆ ಬಳಸುವ ಬೊಟೊಕ್ಸ್ ಚುಚ್ಚುಮದ್ದನ್ನು ಈ ಚಿಕಿತ್ಸಾ ವಿಧಾನದಲ್ಲಿ ಬಳಸಲಾಗಿದೆ ಎಂದಿದ್ದಾರೆ.