HEALTH TIPS

ಅಯೋಧ್ಯೆಯಲ್ಲಿ ನೆಲೆಸಿದ ಬಾಲರಾಮ; ಎಂಟು ಸಾವಿರ ಅತಿಥಿಗಳು ಸಾಕ್ಷಿ

           ಯೋಧ್ಯೆ: ಕೋಟ್ಯಂತರ ಮಂದಿ ಆಸ್ತಿಕರು ವರ್ಷಗಳಿಂದ ಕಾಯುತ್ತಿದ್ದ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಮುಖ್ಯ ಯಜಮಾನನ ಸ್ಥಾನದಲ್ಲಿ ನಿಂತು ವೈದಿಕ ಸಂಪ್ರದಾಯಕ್ಕೆ ಅನುಗುಣವಾಗಿ ಸೋಮವಾರ ನೆರವೇರಿಸಿದರು.

            ರಾಮ ಮಂದಿರದ ಆವರಣದಲ್ಲಿ ಉಪಸ್ಥಿತರಿದ್ದ ಸರಿಸುಮಾರು ಎಂಟು ಸಾವಿರ ಅತಿಥಿಗಳು ಈ ಐತಿಹಾಸಿಕ ಕ್ಷಣಗಳಿಗೆ ನೇರವಾಗಿ ಸಾಕ್ಷಿಯಾದರು. ದೇಶ ಹಾಗೂ ವಿದೇಶಗಳಲ್ಲಿ ಇರುವ ಕೋಟ್ಯಂತರ ಮಂದಿ ಟಿ.ವಿ. ಪರದೆಯ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಿದರು. ರಾಮ ಮಂದಿರದ ಉದ್ಘಾಟನೆಯು ದೇಶದ ರಾಜಕೀಯ ಹಾಗೂ ಧಾರ್ಮಿಕ ಇತಿಹಾಸದಲ್ಲಿ ಬಹಳ ಮಹತ್ವದ್ದು ಎಂದು ವಿಶ್ಲೇಷಿಸಲಾಗಿದೆ.

              ರಾಮ ಮಂದಿರ ಭೇಟಿಗೆ ಸಾರ್ವಜನಿಕರಿಗೆ ಮಂಗಳವಾರದಿಂದ ಅವಕಾಶ ಸಿಗಲಿದೆ.

ಲಕ್ಷ್ಮೀಕಾಂತ ದೀಕ್ಷಿತ್ ಮತ್ತು ಗಣೇಶ್ವರ ದ್ರಾವಿಡ್ ನೇತೃತ್ವದಲ್ಲಿ 121 ಮಂದಿ ವೈದಿಕ ವಿದ್ವಾಂಸರು ಮಂತ್ರ ಪಠಣ ಹಾಗೂ ವಿಶೇಷ ಪೂಜೆಯ ಮೂಲಕ ಪ್ರಾಣಪ್ರತಿಷ್ಠಾಪನೆಯ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಮ ಮಂದಿರದ ಗರ್ಭಗುಡಿಯಲ್ಲಿ ಮೋದಿ ಅಷ್ಟೇ ಅಲ್ಲದೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯಪಾಲೆ ಆನಂದಿಬೆನ್ ಪಟೇಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಮತ್ತಿತರರೂ ಇದ್ದರು.

            -ಅಮಿತ್ ಶಾ, ಕೇಂದ್ರ ಗೃಹ ಸಚಿವಈ ಕ್ಷಣಕ್ಕಾಗಿ ಹಲವು ತಲೆಮಾರುಗಳು ತ್ಯಾಗ ಮಾಡಿವೆ. ಆದರೆ, ಶ್ರೀರಾಮ ಜನ್ಮಭೂಮಿಯಲ್ಲಿ ಮತ್ತೆ ಮಂದಿರ ನಿರ್ಮಾಣ ಮಾಡುವ ಸಂಕಲ್ಪವನ್ನು ಅಲುಗಾಡಿಸಲು ಯಾವ ಬೆದರಿಕೆಗೂ ಸಾಧ್ಯವಾಗಲಿಲ್ಲ.

              ಮೋದಿ ಅವರು ಶುಭಪ್ರದವಾದ ಅಭಿಜಿತ್ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ನಡೆಸಿದರು. ಈ ಮುಹೂರ್ತವು 84 ಸೆಕೆಂಡುಗಳಷ್ಟು ಅವಧಿಗೆ ಇತ್ತು. ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಮೋದಿ ಅವರು ಧಾರ್ಮಿಕ ವಿಧಿಯ ಭಾಗವಾಗಿ ಸಂಕಲ್ಪ ನೆರವೇರಿಸಿದರು.

ಪಂಡಿತ್ ಸುನಿಲ್ ಶಾಸ್ತ್ರಿ ಅವರಿಂದ ಮೋದಿ ಅವರು ಸಂಕಲ್ಪ ಸ್ವೀಕರಿಸಿದರು.

          ಇದಕ್ಕೂ ಮೊದಲು ಶಾಸ್ತ್ರಿ ಅವರು ಮೋದಿ ಹಾಗೂ ಅಲ್ಲಿದ್ದ ಇತರ ಪ್ರಮುಖರ ಮೇಲೆ ಪವಿತ್ರ ನದಿಗಳ ನೀರನ್ನು ಪ್ರೋಕ್ಷಿಸಿದರು.

               ಮಂದಿರ ಸಂಕೀರ್ಣದ ಪ್ರವೇಶ ದ್ವಾರದಿಂದ ಗರ್ಭಗುಡಿಯವರೆಗೆ ಪ್ರಧಾನಿ ನಡೆದು ಬರುತ್ತಿದ್ದಾಗ, ಅಲ್ಲಿನ ತಡೆಬೇಲಿಗಳ ಹಿಂದೆ ಇದ್ದ ಸಾಧುಗಳು ಮತ್ತು ಸ್ವಾಮೀಜಿಗಳು ಮೋದಿ ಅವರ ಭಾವಚಿತ್ರ ಸೆರೆಹಿಡಿದರು. ಗರ್ಭಗೃಹ ಪ್ರವೇಶಿಸುವ ಮೊದಲು ಮೋದಿ ಅವರು ಐದು ಮಂಟಪಗಳನ್ನು ದಾಟಿ ಬಂದರು.

               ಮೋದಿ ಅವರು ಕೆನೆಬಣ್ಣದ ಧೋತಿ, ಬಂಗಾರದ ಬಣ್ಣದ ಕುರ್ತಾ ಧರಿಸಿದ್ದರು ಮತ್ತು ಉತ್ತರೀಯ ಹೊದ್ದಿದ್ದರು. ಗರ್ಭಗೃಹದ ಕಡೆ ಸಾಗುವಾಗ ಬೆಳ್ಳಿಯ ಛತ್ರಿಯನ್ನು ಎರಡೂ ಕೈಗಳಲ್ಲಿ ಹಿಡಿದಿದ್ದರು.

           ಪುರೋಹಿತರು ನೀಡಿದ ಸೂಚನೆಗಳಿಗೆ ಅನುಗುಣವಾಗಿ ಪ್ರಧಾನಿಯವರು ಧಾರ್ಮಿಕ ವಿಧಿಗಳನ್ನು ಕೈಗೊಂಡರು. ಅಲ್ಲದೆ, ಪುರೋಹಿತರು ಹೇಳಿದ ಮಂತ್ರಗಳನ್ನು ತಾವೂ ಉಚ್ಛರಿಸಿದರು. ದೇವ-ದೇವತೆಗಳನ್ನು ಆವಾಹಿಸಲು ಪುರೋಹಿತರು 16 ಮಂತ್ರಗಳನ್ನು ಪಠಿಸಿದರು. 16ನೆಯ ಮಂತ್ರದ ಪಠಣದ ನಂತರ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಯಿತು.

               -ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿಮಂದಿರವನ್ನು ಎಲ್ಲಿ ನಿರ್ಮಿಸಬೇಕೆಂದು ಸಂಕಲ್ಪ ತೊಟ್ಟಿದ್ದೆವೋ, ಅಲ್ಲಿಯೇ ನಿರ್ಮಿಸಲಾಗಿದೆ. ರಾಮ ಮಂದಿರವು ರಾಷ್ಟ್ರಮಂದಿರವೂ ಹೌದು.

                 ನಂತರದಲ್ಲಿ ಮೋದಿ ಅವರು ಬಾಲರಾಮನಿಗೆ ಆರತಿ ಬೆಳಗಿದರು. ವಿಗ್ರಹವನ್ನು ಮರೆಮಾಚಿದ್ದ ಬಟ್ಟೆಯನ್ನು ತೆಗೆದ ಮೋದಿ ಅವರು, ವಿಗ್ರಹದ ಕಣ್ಣಿಗೆ ಕಾಡಿಗೆ ಹಚ್ಚಿದರು. ಪ್ರಾಣಪ್ರತಿಷ್ಠಾಪನೆಯ ಕೊನೆಯಲ್ಲಿ ಮೋದಿ ಅವರು ಬಾಲರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಕಾರ್ಯಕ್ರಮದುದ್ದಕ್ಕೂ ಮಂಗಳವಾದ್ಯಗಳನ್ನು ಮೊಳಗಿಸಲಾಯಿತು.

               ಗರ್ಭಗುಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್ ಮೂಲಕ ಮಂದಿರ ಸಂಕೀರ್ಣದ ಮೇಲೆ ಹಲವು ಬಾರಿ ಹೂವಿನ ಮಳೆ ಸುರಿಸಲಾಯಿತು. ಅತಿಥಿಗಳಿಗೆ ಚಿಕ್ಕ ಗಂಟೆಯನ್ನು ನೀಡಲಾಗಿತ್ತು, ಕಾರ್ಯಕ್ರಮದುದ್ದಕ್ಕೂ ಗಂಟೆಯ ಸದ್ದು ಕೇಳಿಬರುತ್ತಿತ್ತು.

            ಪ್ರಾಣಪ್ರತಿಷ್ಠಾಪನೆ ನಂತರ, ಮಂದಿರದ ಹೊರಗೆ ಹಾಕಲಾಗಿದ್ದ ವೇದಿಕೆಗೆ ಪ್ರಧಾನಿ ಬಂದಾಗ ಅವರಿಗೆ ಸಾಧು, ಸಂತರು ಶುಭ ಕೋರಿದರು. ಪ್ರಧಾನಿಯವರು ಮಹಂತ ಗೋವಿಂದ ಗಿರಿ ಅವರಿಂದ ಚರಣಾಮೃತ (ಅಭಿಷೇಕದ ತೀರ್ಥ) ಸ್ವೀಕರಿಸುವ ಮೂಲಕ 11 ದಿನಗಳ ವ್ರತ ಕೊನೆಗೊಳಿಸಿದರು.

ರಾಮನಲ್ಲಿ ಕ್ಷಮೆಯಾಚಿಸಿದ ಪ್ರಧಾನಿ ಮೋದಿ

                      ಶ್ರೀರಾಮನನ್ನು ವರ್ಷಗಳಿಂದ ಟೆಂಟ್‌ನಲ್ಲಿ ಇರಿಸಿದ್ದಕ್ಕಾಗಿ ಕ್ಷಮೆಯಾಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಬಾಲರಾಮ ಇನ್ನು ಟೆಂಟ್‌ನಲ್ಲಿ ಇರಬೇಕಾಗಿಲ್ಲ, ಅವನು ಇನ್ನು ಭವ್ಯವಾದ ಮಂದಿರದಲ್ಲಿ ಇರುತ್ತಾನೆ' ಎಂದು ಹೇಳಿದರು. ದೇಶದ ಸಂವಿಧಾನದ ಮೊದಲ ಪ್ರತಿಯಲ್ಲಿ ರಾಮ ಇದ್ದ ಎಂಬುದನ್ನು ನೆನಪಿಸಿಕೊಂಡರು.

               ಅಲ್ಲದೆ, ನ್ಯಾಯ ಕೊಡಿಸಿದ್ದಕ್ಕಾಗಿ ಅವರು ದೇಶದ ನ್ಯಾಯಾಂಗಕ್ಕೆ ಧನ್ಯವಾದ ಅರ್ಪಿಸಿದರು. 2019ರಲ್ಲಿ ನೀಡಿದ್ದ ಸರ್ವಾನುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಅಯೋಧ್ಯೆಯಲ್ಲಿ ವಿವಾದಕ್ಕೆ ಗುರಿಯಾಗಿದ್ದ ಜಾಗವು ಹಿಂದೂಗಳಿಗೆ ಸೇರಿದ್ದು ಎಂದು ಹೇಳಿತ್ತು.

           ಜನವರಿ 22ನೇ ತಾರೀಕು ದೇಶದ ಪಾಲಿಗೆ ಹೊಸ ಆರಂಭವನ್ನು ತಂದಿದೆ, ಹೊಸ ಯುಗ ಶುರುವಾಗುತ್ತಿರುವುದನ್ನು ಸೂಚಿಸಿದೆ ಎಂದು ಮೋದಿ ಹೇಳಿದರು.

             ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ನಂತರ ಅವರು ಅತಿಥಿಗಳನ್ನು ಉದ್ದೇಶಿಸಿ ಮಾತನಾಡಿದರು.

              ಶ್ರೀರಾಮನಲ್ಲಿ ಕ್ಷಮೆ ಯಾಚಿಸುವ ಮಾತು ಕಾಂಗ್ರೆಸ್ಸಿನ ಕೈಕಟ್ಟಿಹಾಕುವ ಯತ್ನದಂತೆ ಇದೆ ಎಂದು ವಿಶ್ಲೇಷಿಸಲಾಗಿದೆ. ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷವು ಅಡ್ಡಿಗಳನ್ನು ಸೃಷ್ಟಿಸಲು ಯತ್ನಿಸಿತು ಎಂದು ಪರೋಕ್ಷವಾಗಿ ಹೇಳುವ ಯತ್ನ ಇದು ಎನ್ನಲಾಗಿದೆ.

           'ಪ್ರಭು ಶ್ರೀರಾಮನಲ್ಲಿ ನಾನು ಕ್ಷಮೆ ಕೋರುತ್ತಿದ್ದೇನೆ... ನಮ್ಮ ಪ್ರಯತ್ನಗಳಲ್ಲಿ, ತ್ಯಾಗದಲ್ಲಿ ಒಂದಿಷ್ಟು ಕೊರತೆಗಳು ಇದ್ದಿರಬೇಕು, ನಮಗೆ ರಾಮ ಮಂದಿರ ನಿರ್ಮಿಸಲು ಬಹುಕಾಲ ಆಗಲಿಲ್ಲ' ಎಂದು ಪ್ರಧಾನಿ ಹೇಳಿದರು. ಮಾತನಾಡುವಾಗ ತಾವು ಭಾವುಕವಾಗುತ್ತಿರುವುದಾಗಿ, ಕೊರಳು ಉಬ್ಬಿದಂತೆ ಅನಿಸುತ್ತಿರುವುದಾಗಿ, ಮೈ ನಡುಗಿದ ಅನುಭವ ಆಗುತ್ತಿರುವುದಾಗಿ ಅವರು ಹೇಳಿದರು.

'ಸಂವಿಧಾನದ ಮೊದಲ ಪ್ರತಿಯಲ್ಲಿ ರಾಮನ ಚಿತ್ರ ಇತ್ತಾದರೂ, ರಾಮ ತನ್ನ ಸ್ಥಾನಕ್ಕಾಗಿ ದೀರ್ಘ ಹೋರಾಟ ನಡೆಸಬೇಕಾಯಿತು' ಎಂದು ಮೋದಿ ಹೇಳಿದರು.

               'ಜನವರಿ 22ರಂದು ಸೂರ್ಯನು ಹೊಸ ಬೆಳಕನ್ನು ಹೊತ್ತು ತಂದಿದ್ದಾನೆ... ಇದು ಕೇವಲ ಒಂದು ದಿನಾಂಕ ಅಲ್ಲ. ಇದು ಹೊಸ ಯುಗದ ಆರಂಭ... ಬಹುಕಾಲದ ತಾಳ್ಮೆಯ ಪ್ರತೀಕವಾದ ಪರಂಪರೆಯೊಂದು ನಮಗೆ ಸಿಕ್ಕಿದೆ... ಗುಲಾಮಗಿರಿಯ ಸಂಕೋಲೆಗಳನ್ನು ಕಳಚಿ ದೇಶವು ಈ ರೀತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ' ಎಂದು ಪ್ರಧಾನಿ ಹೇಳಿದರು. ಈ ಸಂದರ್ಭದ ಬಗ್ಗೆ ಒಂದು ಸಾವಿರ ವರ್ಷಗಳ ನಂತರವೂ ಜನ ಮಾತನಾಡುತ್ತಾರೆ ಎಂದರು.

                'ಇದು ಒಂದು ಮಂದಿರ ಮಾತ್ರವೇ ಅಲ್ಲ... ಇದು ಭಾರತದ ದರ್ಶನ ಮತ್ತು ತಾತ್ವಿಕತೆಯ ಮಂದಿರ... ಇದು ಮಂದಿರಗಳ ದೇಶವು ರಾಮನ ರೂಪದಲ್ಲಿ ಎಚ್ಚೆತ್ತಿರುವುದರ ಸೂಚಕ' ಎಂದು ಬಣ್ಣಿಸಿದರು.

             'ರಾಮ ಭಾರತದ ನಂಬಿಕೆ... ರಾಮನು ಭಾರತದ, ನಮ್ಮ ಆಲೋಚನೆಗಳ, ಘನತೆಯ ಮೂಲ ನೆಲೆ... ರಾಮ ಎಲ್ಲವೂ ಹೌದು... ಅವನು ಎಲ್ಲವನ್ನೂ ಒಳಗೊಂಡಿದ್ದಾನೆ... ಅವನೇ ಜಗತ್ತು... ರಾಮನಿಗೆ ತಕ್ಕುದಾದ ಸ್ಥಾನವನ್ನು ಕಲ್ಪಿಸಿದಾಗ ಅದರ ಪರಿಣಾಮವು ಶತಮಾನಗಳ ಕಾಲ ಉಳಿಯಲಿದೆ... ರಾಮ ಮಂದಿರ ನಿರ್ಮಾಣ ಆಗಿದೆ... ಇನ್ನು ಮುಂದೆ ಏನು ಎಂಬುದನ್ನು ತಿಳಿಯಲು ಅಯೋಧ್ಯೆಯು ಬಯಸುತ್ತಿದೆ' ಎಂದು ಅವರು ಹೇಳಿದರು. ಮಂದಿರ ನಿರ್ಮಾಣ ದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರ ಮೇಲೆ ಮೋದಿ ಹೂವು ಎರಚಿದರು. ನಂತರ ಕುಬೇರ ತಿಲದಲ್ಲಿ ಇರುವ ಶಿವ ಮಂದಿರಕ್ಕೆ ಭೇಟಿ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries