ನವದೆಹಲಿ: ತಮಿಳುನಾಡಿನ ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಶೇಷ ಪೂಜೆ, ಭಜನೆ, ಪ್ರಸಾದ, ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನಾಳೆ (ಸೋಮವಾರ) ನಡೆಯಲಿದ್ದು, 200ಕ್ಕೂ ಹೆಚ್ಚು ದೇವಾಲಯಗಳಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು.
'ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ದೇವಾಲಯಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಯಾವುದೇ ಪೂಜೆ, ಭಜನೆ, ಪ್ರಸಾದ, ಅನ್ನಸಂತರ್ಪಣೆ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ. ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೂ ಪೊಲೀಸರು ತಡೆಯುತ್ತಿದ್ದಾರೆ. ಕೆಲವು ಕಡೆ ಆಯೋಜಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಡಿಎಂಕೆ ಸರ್ಕಾರದ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸುತ್ತೇನೆ' ಎಂದು ಸೀತಾರಾಮನ್ ಬರೆದುಕೊಂಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ತಮಿಳಿನ 'ದಿನಮಲರ್' ದಿನಪತ್ರಿಕೆಯ ಲೇಖನವನ್ನು ಹಂಚಿಕೊಂಡಿದ್ದಾರೆ. ರಾಮನ ಹೆಸರಿನಲ್ಲಿ ಯಾವುದೇ ಪೂಜೆಗೆ ಅವಕಾಶ ನೀಡದಂತೆ ದೇವಾಲಯದ ಅಧಿಕಾರಿಗಳಿಗೆ ಸರ್ಕಾರದ ವತಿಯಿಂದ ಮೌಖಿಕ ಆದೇಶವನ್ನು ನೀಡಲಾಗಿದೆ ಎಂದು ಲೇಖನದಲ್ಲಿ ಆರೋಪಿಸಲಾಗಿದೆ.
'ತಮಿಳುನಾಡಿನ ಹಲವು ಭಾಗಗಳಲ್ಲಿ ಪೂಜೆ, ಭಜನೆ, ಪ್ರಸಾದ, ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಬೆದರಿಕೆ ಹಾಕುತ್ತಿರುವ ದೃಶ್ಯಗಳು ನನ್ನ ಮನಸ್ಸನ್ನು ಕಲಕಿದೆ. ಸೋಮವಾರ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದ ನೇರ ಪ್ರಸಾರದ ವೇಳೆ ವಿದ್ಯುತ್ ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಕೇಬಲ್ ಟಿವಿ ಆಪರೇಟರ್‌ಗಳಿಗೆ ತಿಳಿಸಲಾಗಿದೆ. 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಸರ್ಕಾರ ಹಿಂದೂ ವಿರೋಧ ಕ್ರಮಗಳನ್ನು ಜರುಗಿಸುತ್ತಿದೆ' ಎಂದು ಅವರು ಟೀಕಿಸಿದ್ದಾರೆ.
ನಿರ್ಮಲಾ ಆರೋಪಗಳನ್ನು ಬಲವಾಗಿ ತಳ್ಳಿಹಾಕಿರುವ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಸಚಿವ ಪಿ.ಕೆ. ಶೇಖರ್‌ಬಾಬು, 'ನಿರ್ಮಲಾ ಸೀತಾರಾಮನ್ ಅವರಂತಹ ಉನ್ನತ ಸ್ಥಾನದಲ್ಲಿರುವವರು 'ಸುಳ್ಳು' ಸುದ್ದಿಯನ್ನು ಹರಡಲು ತೊಡಗಿರುವುದು ದುರದೃಷ್ಟಕರ' ಎಂದು ಹೇಳಿದ್ದಾರೆ.
ಶ್ರೀರಾಮನ ಹೆಸರಿನಲ್ಲಿ ಪೂಜೆ, ಭಜನೆ, ಪ್ರಸಾದ, ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಧಾರ್ಮಿಕ ದತ್ತಿ ಇಲಾಖೆ ಯಾವುದೇ ನಿಷೇಧವನ್ನು ವಿಧಿಸಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಶೇಖರ್‌ಬಾಬು ತಿಳಿಸಿದ್ದಾರೆ.
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ರಾಜ್ಯದಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸುವ ಭಕ್ತರ ಯೋಜನೆಗಳನ್ನು ಡಿಎಂಕೆ ಸರ್ಕಾರವು ವಿಫಲಗೊಳಿಸುತ್ತಿದೆ ಎಂದು ಆರೋಪಿಸಿದ ಕೆಲವೇ ಗಂಟೆಗಳ ನಂತರ ನಿರ್ಮಲಾ ಸೀತಾರಾಮನ್ ಅವರು 'ಎಕ್ಸ್'ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನಾವು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಎಂದು ಹೇಳುವ ಡಿಎಂಕೆ ನಾಯಕರು ಹಿಂದೂ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದೀಗ ರಾಮಮಂದಿರ ಉದ್ಘಾಟನೆ ವಿಚಾರ ತಮಿಳುನಾಡಿನಲ್ಲಿ ಡಿಎಂಕೆ -ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.