ನವದೆಹಲಿ: ದೇಶದ ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ಕಾಲಮಿತಿಯಲ್ಲಿ ಅಮೆರಿಕದಿಂದ ವೀಸಾ ಸಿಗುತ್ತಿಲ್ಲ. ಇದರಿಂದ ದೇಶೀಯ ವ್ಯವಹಾರದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಟ್ರೇಡ್ ಪಾಲಿಸಿ ಪೋರಂ (ಟಿಪಿಎಫ್) ಸಭೆಯಲ್ಲಿ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.

ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧ ಶುಕ್ರವಾರ ಟಿಪಿಎಫ್‌ನ 14ನೇ ಸಭೆ ನಡೆಯಿತು. ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತೈ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್, ವೀಸಾ ವಿಳಂಬದ ಸಮಸ್ಯೆ ಕುರಿತು ಚರ್ಚಿಸಿದರು.
ದೇಶದ ವೃತ್ತಿಪರರು, ನುರಿತ ಕೆಲಸಗಾರರು, ವಿದ್ಯಾರ್ಥಿಗಳು, ಹೂಡಿಕೆದಾರರು ಮತ್ತು ವ್ಯಾಪಾರಿಗಳು ದ್ವಿಪಕ್ಷೀಯ ಆರ್ಥಿಕತೆ ಮತ್ತು ತಾಂತ್ರಿಕ ಪಾಲುದಾರಿಕೆಗೆ ಸಲ್ಲಿಸುತ್ತಿರುವ ಕೊಡುಗೆ ಬಗ್ಗೆ ಚರ್ಚಿಸಲಾಯಿತು.
ವಾಣಿಜ್ಯ ಉದ್ದೇಶದಿಂದ ಅಮೆರಿಕಕ್ಕೆ ಭೇಟಿ ನೀಡುವವರಿಗೆ ಸಕಾಲದಲ್ಲಿ ವೀಸಾ ಸಿಗದೆ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಭೆಯಲ್ಲಿ ಸಚಿವ ಪೀಯೂಷ್ ಪ್ರಸ್ತಾಪಿಸಿದರು. ಅರ್ಹರಿಗೆ ತ್ವರಿತವಾಗಿ ವೀಸಾ ಸೌಲಭ್ಯ ಕಲ್ಪಿಸುವಂತೆ ಅಮೆರಿಕಕ್ಕೆ ಕೋರಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಚ್-1ಬಿ ವಲಸೆಯೇತರ ವೀಸಾ ಆಗಿದೆ. ಇದರಡಿ ಅಮೆರಿಕದ ಸಂಸ್ಥೆಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಭಾರತೀಯರಿಗೆ ಅನುಕೂಲ ಕಲ್ಪಿಸಲು ಪ್ರಸ್ತುತ ಅಮೆರಿಕವು ಈ ವೀಸಾ ನವೀಕರಣಕ್ಕೆ ಪ್ರಾಯೋಗಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಆದರೆ, ಈ ವೀಸಾದಡಿ ಹಲವು ಭಾರತೀಯರು ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ವೀಸಾ ನವೀಕರಣಕ್ಕೆ ಕಾಯಂ ವ್ಯವಸ್ಥೆ ರೂಪಿಸುವಂತೆ ಕೋರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.