ಎರ್ನಾಕುಳಂ: ಶಾಲಾ ಅಸೆಂಬ್ಲಿ ವೇಳೆ ಅರಣ್ಯವಾಸಿಗಳಿಗೆ ಸೇರಿದ 5ನೇ ತರಗತಿ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಮುಖ್ಯೋಪಾಧ್ಯಾಯಿನಿಯೊಬ್ಬರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಪರಾಧ ಎಸಗುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆಯೇ ಎಂಬ ಅನುಮಾನ ಮೂಡಿದೆ ಎಂದು ಸೂಚಿಸಿದ ನ್ಯಾಯಮೂರ್ತಿ ಕೆ.ಬಾಬು ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.
ವಿವಾದಾತ್ಮಕ ಘಟನೆಯು ಅಕ್ಟೋಬರ್ 19, 2023 ರಂದು ನಡೆದಿತ್ತು. ಶಾಲೆಯ ಅಸೆಂಬ್ಲಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೋಡುತ್ತಿರುವಾಗ ಮುಖ್ಯೋಪಾಧ್ಯಾಯಿನಿ ವಿದ್ಯಾರ್ಥಿಯ ಕೂದಲನ್ನು ಕತ್ತರಿಸಿದ್ದಾರೆ. ಸಾರ್ವಜನಿಕವಾಗಿ ತಲೆಗೂದಲು ಕತ್ತರಿಸಿದ್ದು ವಿದ್ಯಾರ್ಥಿನಿಯರ ಘನತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂಬುದು ಶಿಕ್ಷಕಿಯ ಮೇಲಿನ ಪ್ರಕರಣ.
ಮಗುವಿನ ಹೇಳಿಕೆಯನ್ನು ಆಧರಿಸಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕಿರುಕುಳ ತಡೆ ಕಾಯ್ದೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಶಿಕ್ಷಕಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿದ್ದು, ಬಾಲನ್ಯಾಯ ಕಾಯ್ದೆಯಡಿ ಆಕೆ ತಪ್ಪಿತಸ್ಥಳು ಎಂದು ತೀರ್ಪು ನೀಡಿದೆ. ಬಳಿಕ ಹೈಕೋರ್ಟ್ ಜಾಮೀನು ನೀಡಿತು.