ತಿರುವನಂತಪುರ: ಎಡಪಂಥೀಯ ಸೈಬರ್ ಕಾರ್ಯಕರ್ತರೋರ್ವರು ಸೋಮವಾರ ಮಧ್ಯಾಹ್ನ ಫೋರ್ಟ್ ಪೋಲಿಸ್ ಠಾಣಾ ವ್ಯಾಪ್ತಿಯ ಪುಥೆನ್ ಥೆರುವು ಪ್ರದೇಶದಲ್ಲಿಯ ತನ್ನ ಬಾಡಿಗೆ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಲಪ್ಪುರಂ ಜಿಲ್ಲೆಯ ಮೆಲತ್ತೂರು ಮೂಲದ ಗೋಪಿ ಉನ್ನಿಕೃಷ್ಣನ್ ಅವರ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇದು ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂದು ಪೋಲಿಸರು ತಿಳಿಸಿದ್ದಾರೆ.
ಗೋಪಿ ಸೈಬರ್ಸ್ಪೇಸ್ನಲ್ಲಿ ಬೀನಾ ಸನ್ನಿ ಎಂಬ ಗುಪ್ತನಾಮದೊಂದಿಗೆ ಸಕ್ರಿಯರಾಗಿದ್ದರು. ಸಿಪಿಎಂ ರಾಜಕೀಯಕ್ಕೆ ತನ್ನ ಬದ್ಧನಿಷ್ಠೆಯಿಂದಾಗಿ ಅವರ ಫೇಸ್ಬುಕ್ ಪೇಜ್ ಗಮನ ಸೆಳೆದಿತ್ತು.
ಫೇಸ್ಬುಕ್ ಪೇಜ್ ಹಲವು ವಿವಾದಗಳನ್ನೂ ಸೃಷ್ಟಿಸಿತ್ತು ಮತ್ತು ಅದರ ವಿಷಯ ಹಾಗೂ ಭಾಷೆಯ ಕುರಿತು ಹಲವಾರು ದೂರುಗಳು ದಾಖಲಾಗಿದ್ದವು.
ತನ್ನ ಸಾವಿಗೆ ಕೆಲವೇ ಗಂಟೆಗಳ ಮೊದಲು ತನ್ನ ಫಾಲೋವರ್ಗಳಿಗೆ ತನ್ನ ನಿಜವಾದ ಗುರುತನ್ನು ತಿಳಿಸಿದ್ದ ಗೋಪಿ, ಸೋಷಿಯಲ್ ಮೀಡಿಯಾ ಖಾತೆಯನ್ನು ತನ್ನ ಹೆಸರಿನಲ್ಲಿ ಬದಲಿಸಿಕೊಂಡಿದ್ದರು.
ಸ್ಥಳೀಯ ದಿನಪತ್ರಿಕೆಯೊಂದರ ಪ್ರಸರಣ ವಿಭಾಗದಲ್ಲಿ ಕೆಲಸ ಮಾಡಿದ್ದ ಗೋಪಿ ಇತ್ತೀಚಿನ ಕೆಲವು ಸಮಯದಿಂದ ಈಸ್ಟ್ ಫೋರ್ಟ್ನಲ್ಲಿಯ ಕುಟುಂಬಶ್ರೀ ಜ್ಯೂಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.