ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಕಾಂಗ್ರೆಸ್ ನಾಯಕ ಪವನ್ ಖೇರಾ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಪವನ್ ಅವರ ಅರ್ಜಿಯ ವಿಚಾರಣೆ ನಡೆಸಿತು.
ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಪ್ರಧಾನಿ ಅವರ ಹೆಸರನ್ನು 'ನರೇಂದ್ರ ಗೌತಮ್ ದಾಸ್ ಮೋದಿ' ಎಂದು ಉಲ್ಲೇಖಿಸಿರುವುದಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ಪರಿಗಣಿಸಲು ಕೋರ್ಟ್ ಒಲವು ಹೊಂದಿಲ್ಲ ಎಂದು ತಿಳಿಸಿತು.
ಪವನ್ ಖೇರಾ ಅವರು 2023ರ ಫೆಬ್ರುವರಿ 17ರಂದು ಮೋದಿ ಅವರ ಹೆಸರನ್ನು 'ಗೌತಮ್ ದಾಸ್' ಎಂದು ಸೇರಿಸಿ ಹೇಳಿದ್ದರು. ಅದಾದ ಬಳಿಕ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದರು.
ಪ್ರಧಾನಿಯವರ ತಂದೆಯ ಹೆಸರನ್ನು ತಪ್ಪಾಗಿ ಹೇಳಿ ಅವಹೇಳನ ಮಾಡಲಾಗಿದೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ, ಅಸ್ಸಾಂನಲ್ಲಿ ವಿರುದ್ಧ ಪ್ರಕರಣ ದಾಖಲಾಗಿವೆ.
2023ರ ಫೆಬ್ರುವರಿ 23ರಂದು ದೆಹಲಿಯಿಂದ ರಾಯಪುರಕ್ಕೆ ತೆರಳಲು ವಿಮಾನವೇರಿದ್ದ ಖೇರಾ ಅವರನ್ನು ಇದೇ ವಿಚಾರವಾಗಿ ಅಸ್ಸಾಂ ಪೊಲೀಸರು ಬಂಧಿಸಿದ್ದರು. ಬಳಿಕ, ಸುಪ್ರೀಂ ಕೋರ್ಟ್‌ನಿಂದ ದೊರೆತ ಮಧ್ಯಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆಯಾಗಿದ್ದರು.
ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದ್ದರಿಂದ, ಖೇರಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.