ನವದೆಹಲಿ: ಬಿಜೆಪಿಯು ತನ್ನ ಆಡಳಿತದ ವೈಫಲ್ಯಗಳನ್ನು ಮರೆಮಾಚಲು ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದೆ ಎಂದು ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಖಚಿತಪಡಿಸಿಕೊಳ್ಳಲು ಒಗ್ಗಟ್ಟಾಗಿ ಕೆಲಸ ಮಾಡುವಂತೆ ಪಕ್ಷದ ಮುಖಂಡರಿಗೆ ಕರೆ ನೀಡಿದರು.
'ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಯು ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಉದ್ದೇಶಪೂರ್ವಕವಾಗಿ ಎಳೆದು ತರುತ್ತಿದೆ' ಎಂದು ಗುರುವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ತಿಳಿಸಿದರು.
2004 ರಲ್ಲಿ ಸೋನಿಯಾ ಗಾಂಧಿ ಅವರು ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದನ್ನು ನೆನಪಿಸಿಕೊಂಡ ಖರ್ಗೆ, 'ಅಂದು ಪ್ರತಿಯೊಂದು ಗ್ರಾಮ, ಪಟ್ಟಣ ಮತ್ತು ನಗರಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರು. ಅದೇ ರೀತಿಯ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ತೋರುವ ಕಾಲ ಸನ್ನಿಹಿತವಾಗಿದೆ' ಎಂದು ಕಿವಿಮಾತು ಹೇಳಿದರು.
'ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿರಿ. ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಬೇಡಿ. ಕೇಂದ್ರ ಸರ್ಕಾರದ ಸುಳ್ಳು, ಮೋಸ ಮತ್ತು ತಪ್ಪುಗಳನ್ನು ಜನರ ಮುಂದಿಟ್ಟು ಬಿಜೆಪಿಗೆ ತಕ್ಕ ಪ್ರತ್ಯುತ್ತರ ಕೊಡಲು ಸಿದ್ಧರಾಗಿ' ಎಂದು ಕರೆಕೊಟ್ಟರು.
ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ನರೇಂದ್ರ ಮೋದಿ ಸರ್ಕಾರ ನಿರಂತರ ಕಡೆಗಣಿಸುತ್ತಾ ಬಂದಿದೆ ಎಂದು ಅವರು ಆರೋಪಿಸಿದರು.
'ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಜಾರಿ ಮತ್ತು ಆಧುನಿಕ ಭಾರತದ ನಿರ್ಮಾಣದಲ್ಲಿ ಪಕ್ಷದ ಕೊಡುಗೆ ಏನೆಂಬುದು ಪ್ರತಿಯೊಬ್ಬರೂ ತಿಳಿದಿರಬೇಕು. ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ' ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರು ಪಾಲ್ಗೊಂಡರು. ಡಿಸೆಂಬರ್‌ನಲ್ಲಿ ಪಕ್ಷದ ಸಂಘಟನೆಯನ್ನು ಪುನರ್‌ರಚಿಸಿದ ಬಳಿಕ ನಡೆದ ಮೊದಲ ಸಭೆಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೂ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಹಗಲು-ರಾತ್ರಿಯೆನ್ನದೆ ದುಡಿದರೆ ನಮಗೆ ಮುಂಬರುವ ಲೋಕಸಭಾ ಚುನಾವಣೆ ಬಳಿಕ ಪರ್ಯಾಯ ಸರ್ಕಾರವೊಂದನ್ನು ಜನರಿಗೆ ನೀಡಲು ಸಾಧ್ಯ'ಮತದಾರರ ಪಟ್ಟಿ ಮೇಲೆ ಗಮನವಿಡಿ' 'ಎಸ್‌ಸಿ ಎಸ್‌ಟಿ ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗದಂತೆ ಜಾಗರೂಕರಾಗಿರಬೇಕು. ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಈ ಬಗ್ಗೆ ಗಮನವಿಡಬೇಕು. ಈ ವಿಚಾರದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು' ಎಂದು ಖರ್ಗೆ ಅವರು ಪಕ್ಷದ ಮುಖಂಡರಿಗೆ ಸೂಚಿಸಿದರು.