ಅಯೋಧ್ಯೆ: ರಾಮಮಂದಿರದಲ್ಲಿ ನಡೆದ ಬಾಲರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ದಿನ ಸಂಜೆ ದೇಶವ್ಯಾಪಿ ದೀಪೋತ್ಸವ ಜರುಗಿದೆ.
ಅಯೋಧ್ಯೆಯ ಸರಯೂ ನದಿಯ ಘಾಟ್‌ನಲ್ಲಿ ಸೋಮವಾರ ಸಂಜೆ ಸಂಧ್ಯಾರತಿ ಜರುಗಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಇದರಲ್ಲಿ ಪಾಲ್ಗೊಂಡರು. ನಂತರ ನದಿ ತಟದಲ್ಲಿ ದೀಪಗಳನ್ನು ಬೆಳಗಿದರು.
ಈ ಸಡಗರ ಭಾರತದಲ್ಲಿ ಮಾತ್ರವಲ್ಲದೇ, ನೇಪಾಳದಲ್ಲೂ ಜನರು ದೀಪಗಳನ್ನು ಹಚ್ಚಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭ್ರಮಿಸಿ ಧನ್ಯರಾಗುತ್ತಿದ್ದಾರೆ.
ನೇಪಾಳದ ಜನಕಪುರದಲ್ಲೂ ಸಂಭ್ರಮ ಮೇಳೈಸಿದೆ. ಸೀತೆಯ ತವರೂರು ಎಂದೇ ಹೇಳಲಾಗುವ ಇಲ್ಲಿ ಜನರು ದೀಪಗಳನ್ನು ಬೆಳಗಿ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಸಡಗರದಿಂದ ಆಚರಿಸಿದ್ದಾರೆ.
ಪ್ರಾಣ ಪ್ರತಿಷ್ಠಾಪನೆ ದಿನ ದೇಶದ ನಾಗರಿಕರು ದೀಪಾವಳಿಯಂತೆ ಸಂಭ್ರಮಿಸಬೇಕು. ಮನೆಗಳಲ್ಲಿ ದೀಪಗಳನ್ನು ಬೆಳಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ದೇಶದ ಬಹುತೇಕ ಭಾಗಗಳಲ್ಲಿ ಜನರು ಸೋಮವಾರ ಸಂಜೆ ದೀಪಗಳನ್ನು ಬೆಳಗಿದ್ದಾರೆ. ದೇವಾಲಯ, ಮನೆಯ ಆವರಣಗಳಲ್ಲಿ ದೀಪಗಳನ್ನು ಹಚ್ಚಿ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭ್ರಮಿಸಿದ್ದಾರೆ.
ದೀಪೋತ್ಸವ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, 'ಈ ದೃಶ್ಯವನ್ನು ನೋಡುತ್ತಿದ್ದರೆ ಭಗವಾನ್ ರಾಮನು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಅಲ್ಲಿನ ಜನ ಸಂಭ್ರಮಿಸದ ದೃಶ್ಯ ಕಣ್ಣಮುಂದೆ ಬರುತ್ತದೆ' ಎಂದಿದ್ದಾರೆ.