ವಾರಾಣಸಿ: ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಗಳ ಅಡಿಯ ಅವಶೇಷಗಳಲ್ಲಿ ಹನುಮಾನ್ ಮತ್ತು ಗಣಪತಿ ಸೇರಿದಂತೆ ದೇವತೆಗಳ ಪ್ರತಿಮೆಗಳು ಮತ್ತು ಛಿದ್ರವಾಗಿರುವ ಆಕೃತಿಗಳು ಸೇರಿದಂತೆ ಬಹಳಷ್ಟು ಟೆರ್ರಾಕೋಟ ವಸ್ತುಗಳು ಪತ್ತೆಯಾಗಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು(ಎಎಸ್‌ಐ) ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಎರಡು ಗಾಜಿನ ವಸ್ತುಗಳು, ಪೆಂಡೆಂಟ್ ಮತ್ತು ಮುರಿದ ಶಿವಲಿಂಗವೂ ಪತ್ತೆಯಾಗಿದೆ ಎಂದು ಎಎಸ್‌ಐ ತನ್ನ ವೈಜ್ಞಾನಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖಿಸಿದೆ.
'ದೇವತೆಗಳ ಶಿಲ್ಪಗಳು, ವಿವಿಧ ಆಯಾಮಗಳ ಕೀಟಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ಇತ್ಯಾದಿ ಕಲ್ಲಿನ ವಸ್ತುಗಳು ಪತ್ತೆಯಾಗಿವೆ. ಪಟ್ಟಿ ಮಾಡಲಾದ ಶಿಲ್ಪಗಳಲ್ಲಿ ಶಿವಲಿಂಗ, ವಿಷ್ಣು, ಕೃಷ್ಣ, ಹನುಮಾನ್, ಗಣೇಶ ಇತ್ಯಾದಿಗಳು ಸೇರಿವೆ. ದೇವತೆಗಳ ಪ್ರತಿಮೆಗಳು, ಪುರುಷ ಮತ್ತು ಸ್ತ್ರೀ ಆಕೃತಿಗಳು, ಇಟ್ಟಿಗೆಗಳು ಮತ್ತು ಹೆಂಚುಗಳು, ಸ್ಲಿಂಗ್ ಚೆಂಡುಗಳು ಸೇರಿ ವಿವಿಧ ರೀತಿಯ ಟೆರ್ರಾಕೋಟ ವಸ್ತುಗಳು ಸಮೀಕ್ಷೆಯ ಸಮಯದಲ್ಲಿ ಪತ್ತೆಯಾಗಿವೆ 'ಎಂದು ವರದಿಯಲ್ಲಿ ತಿಳಿಸಲಾಗಿದೆ.
'ಮಸೀದಿಯಲ್ಲಿ ಕೆಲ ನಾಣ್ಯಗಳೂ ಸಿಕ್ಕಿದ್ದು,ಈ ನಾಣ್ಯಗಳು ವಿಭಿನ್ನ ಅವಧಿಗೆ ಸೇರಿವೆ. ಮೂರು ನಾಣ್ಯಗಳು ಪರ್ಷಿಯನ್ ಭಾಷೆಯ ಬರಹ ಹೊಂದಿದ್ದು, ಅವುಗಳನ್ನು ಷಾ ಆಲಂ ಬಿಡುಗಡೆ ಮಾಡಿದ್ದಾರೆ. 64 ನಾಣ್ಯಗಳಲ್ಲಿ ಬ್ರಿಟಿಷ್ ಆಡಳಿತಾವಧಿಯ ಭಾರತದ ನಾಣ್ಯಗಳು ಬಹಳಷ್ಟು ಕಂಡುಬಂದಿವೆ. ಅವುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ, ರಾಣಿ ವಿಕ್ಟೋರಿಯಾ, ಎಡ್ವರ್ಡ್-VIIಗೆ ಸೇರಿದ ನಾಣ್ಯಗಳು ಸೇರಿವೆ. ಕೆಲವು ಸವೆತಗೊಂಡಿರುವುದರಿಂದಾಗಿ ಗುರುತಿಸುವುದು ಕಷ್ಟಕರವಾಗಿತ್ತು. ಮಾಧವ್ ರಾವ್ ಸಿಂಧಿಯಾ ಅವರ ಒಂದು ತಾಮ್ರದ ನಾಣ್ಯವೂ ಕಂಡುಬಂದಿದೆ'ಎಂದು ವರದಿ ತಿಳಿಸಿದೆ.