ಶಹಜಹಾನ್‌ಪುರ: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಮಸೀದಿಯ ಧ್ವಜವನ್ನು ತೆಗೆದು ಕೇಸರಿ ಧ್ವಜ ಹಾರಿಸಿದ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ತಿಲ್ಹಾರ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಭಗವಾನ್ ರಾಮನ ಹೆಸರನ್ನು ಹೊಂದಿರುವ ಧ್ವಜವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಪೊಲೀಸರು 17 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಮಚಂದ್ರ ಮಿಷನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್‌ಬಾಗ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಕೆಲವು ದುಷ್ಕರ್ಮಿಗಳು ಮಸೀದಿಯೊಂದರ ಮೇಲೆ ಹತ್ತಿ, ಹಸಿರು ಬಣ್ಣದ ಧ್ವಜವನ್ನು ತೆಗೆದು ಕೇಸರಿ ಧ್ವಜವನ್ನು ನೆಟ್ಟಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಅಂಕಿತ್ ಕಥೇರಿಯಾ, ರೋಹಿತ್ ಜೋಶಿ ಮತ್ತು ರೋಹಿತ್ ಸಕ್ಸೇನಾ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೀನಾ ಹೇಳಿದ್ದಾರೆ.
ಮಂಗಳವಾರ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.