ಕೊಚ್ಚಿ: ಕೊಚ್ಚಿ-ಶಾರ್ಜಾ ಏರ್ ಇಂಡಿಯಾ ವಿಮಾನದ ವಿರುದ್ದ ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ವಿಮಾನದ ಹವಾನಿಯಂತ್ರಣ ಕೆಲಸ ಮಾಡದ ಹಿನ್ನೆಲೆಯಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.
ಇಂದು ಮುಂಜಾನೆ 1.40ಕ್ಕೆ ಕೊಚ್ಚಿಯಿಂದ ಶಾರ್ಜಾಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಎಸಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಹಲವು ಪ್ರಯಾಣಿಕರು ಅಸ್ವಸ್ಥರಾಗಿದ್ದರು. ಇದರಿಂದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಎಸಿ ಕೆಲಸ ನಿಲ್ಲಿಸಿದ್ದರಿಂದ ಪ್ರಯಾಣಿಕರು ವಿಮಾನದೊಳಗೆ ಬೇಗೆಯಿಂದ ಉರಿಯಲಾರಂಭಿಸಿದರು. ಮಕ್ಕಳು, ವೃದ್ಧರ ಕಷ್ಟದ ಬಗ್ಗೆ ತಿಳಿಸಿದಾಗ ವಿಮಾನ ಟೇಕಾಫ್ ಆಗುವ ಮುನ್ನ ಎಸಿ ಕೆಲಸ ಮಾಡಲಿದೆ ಎಂದು ಸಿಬ್ಬಂದಿ ತಿಳಿಸಿದರು. ಆದರೆ ತಡವಾಗಿಯಾದರೂ ವಿಮಾನ ಟೇಕಾಫ್ ಆಗಲಿಲ್ಲ. ಕೊನೆಗೆ ಪ್ರಯಾಣಿಕರು ಪ್ರತಿಭಟನೆ ಆರಂಭಿಸಿದಾಗ ಸಿಬ್ಬಂದಿ ವಿಮಾನದ ಬಾಗಿಲು ತೆರೆದರು.
ನಿಗದಿತ ಸಮಯಕ್ಕಿಂತ 35 ನಿಮಿಷ ತಡವಾಗಿ ವಿಮಾನ ತೆರಳಿತು. ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಸಿಗ್ನಲ್ ಸಿಗದ ಕಾರಣ ವಿಮಾನ ತಡವಾಯಿತು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. 2. 15 ಕ್ಕೆ ವಿಮಾನ ಟೇಕ್ ಆಫ್ ಆಯಿತು. ಟೇಕ್-ಆಫ್ ಆಗುವ ಮುನ್ನವೇ ಎಸಿ ಕೆಲಸ ಆರಂಭಿಸಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.