ಕೋಯಿಕ್ಕೋಡ್: 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ 'ಮೂರು ರಾಜಕೀಯ ಪಕ್ಷಗಳು' ತಮ್ಮನ್ನು ಕೇಳಿವೆ. ಆದರೆ, ಅವುಗಳು ಕೇಳಿರುವುದು ನನ್ನ ಸಿದ್ಧಾಂತವನ್ನು ಮೆಚ್ಚಿ ಅಲ್ಲ. ಬದಲಿಗೆ ತಾನು ಪ್ರಧಾನಿ ಮೋದಿಯವರನ್ನು ಟೀಕಿಸುತ್ತೇನೆ ಎನ್ನುವ ಕಾರಣಕ್ಕೆ ಅವರ ಅಭ್ಯರ್ಥಿಯಾಗುವಂತೆ ಕೇಳಿವೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಇಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ಆದರೆ, 'ನಾನು ಈ ಬಲೆಗೆ ಬೀಳಲು ಬಯಸುವುದಿಲ್ಲ' ಎಂದು ಹೇಳಿದರು.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.
'ಈಗ ಚುನಾವಣೆಗಳು ಬರುತ್ತಿವೆ, ಮೂರು ರಾಜಕೀಯ ಪಕ್ಷಗಳು ನನ್ನ ಹಿಂದೆ ಬಿದ್ದಿವೆ. ನಾನು ಫೋನ್ ಸ್ವಿಚ್ ಆಫ್ ಮಾಡಿದ್ದೇನೆ. ಏಕೆಂದರೆ, ನಾನು ಆ ಬಲೆಗೆ ಬೀಳಲು ಬಯಸುವುದಿಲ್ಲ. ಅವರು, ಜನರಿಗಾಗಿಯೋ ಅಥವಾ ನನ್ನ ಸಿದ್ಧಾಂತವನ್ನು ಮೆಚ್ಚಿಯೋ ನನ್ನನ್ನು ಕೇಳುತ್ತಿಲ್ಲ. ನಾನು ಮೋದಿಯನ್ನು ಟೀಕಿಸುತ್ತೇನೆ ಎಂಬ ಕಾರಣಕ್ಕಾಗಿ ನೀವು ಉತ್ತಮ ಅಭ್ಯರ್ಥಿ' ಎಂದು ಹೇಳುತ್ತಿದ್ದಾರೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ತೀವ್ರ ಟೀಕಾಕಾರ ಪ್ರಕಾಶ್ ರಾಜ್ ಹೇಳಿದರು.
'ಇಂದು ರಾಜಕೀಯ ಪಕ್ಷಗಳು ತಮ್ಮ ಧ್ವನಿಯನ್ನು ಕಳೆದುಕೊಂಡಿವೆ ಮತ್ತು ಅವುಗಳಲ್ಲಿ ಯಾವುದೇ ಸತ್ಯ ಉಳಿದಿಲ್ಲ. ಅವುಗಳಲ್ಲಿ ಅನೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹುಡುಕಲು ಹೆಣಗಾಡುತ್ತಿವೆ. 'ಈ ದೇಶದಲ್ಲಿ ಉತ್ತಮ ಅಭ್ಯರ್ಥಿಗಳೇ ಇಲ್ಲ. ಒಂದು ಕ್ಷೇತ್ರದ ಪ್ರತಿನಿಧಿಯನ್ನು ಹುಡುಕಲು ರಾಜಕೀಯ ಪಕ್ಷಗಳು ಹೆಣಗಾಡುತ್ತಿವೆ. ನಾವು ಇಷ್ಟೊಂದು ಬಡವರೇ?' ಎಂದು ನಟ ಪ್ರಶ್ನಿಸಿದರು.
ಪ್ರಧಾನಿ ಮೋದಿಯನ್ನು 'ದ್ವೇಷಿಸುತ್ತೀರಾ' ಎಂದು ಕೇಳಿದ್ದಕ್ಕೆ ಉತ್ತರಿಸಿದ ಅವರು, 'ನಾನು ಅವರನ್ನು (ಮೋದಿ) ದ್ವೇಷಿಸುವುದಿಲ್ಲ. ಅವರು ನನ್ನ ಮಾವನೋ ಅಥವಾ ಅವರೊಂದಿಗೆ ನನಗೆ ಏನಾದರೂ ಆಸ್ತಿ ಸಮಸ್ಯೆ ಇದೆಯೇ?. ನಾನು ತೆರಿಗೆದಾರನಾಗಿದ್ದೇನೆಂದು ಅವರಿಗೆ ಹೇಳುತ್ತಿದ್ದೇನೆ. ನಾನು ನಿಮಗೆ ಸಂಬಳವನ್ನು ನೀಡುತ್ತೇನೆ. ಆದರೆ, ನೀವು ನನ್ನನ್ನೇ ನಿಮ್ಮ ಸೇವಕನಂತೆ ಪರಿಗಣಿಸುತ್ತಿದ್ದೀರಿ. ಈಗ ಅದು ಕೆಲಸ ಮಾಡುವುದಿಲ್ಲ, ಅವರ ಕೆಲಸವನ್ನು ಅವರು ಮಾಡುವಂತೆ ನಾನು ಕೇಳುತ್ತಿದ್ದೇನೆ' ಎಂದು ಪ್ರಕಾಶ್ ರಾಜ್ ಹೇಳಿದರು.
ಸರ್ಕಾರವನ್ನು ಟೀಕಿಸುವ ತಮ್ಮ ಟ್ವೀಟ್‌ಗಳ ಕುರಿತು ಮಾತನಾಡುವ ಅವರು, 'ನಾನು ಪ್ರತಿಯೊಬ್ಬರ ಹೃದಯದಲ್ಲಿ ಇರುವುದನ್ನು ಮಾತನಾಡುತ್ತೇನೆ ಮತ್ತು ಅದು ನನ್ನ ಧ್ವನಿಯಲ್ಲ, ಇದು ನಮ್ಮ (ಜನರ) ಧ್ವನಿ' ಎಂದು ಹೇಳಿದ್ದಾರೆ.
'ಇದು ನನ್ನ 'ಮನ್ ಕಿ ಬಾತ್' ಅಲ್ಲ ಆದರೆ ನಮ್ಮ 'ಮನ್ ಕಿ ಬಾತ್' ಆಗಿದೆ. ಅಧಿಕಾರದಲ್ಲಿರುವ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳುವ ಅಗತ್ಯವಿದೆ. 'ನಾನು ಅವರಿಗೆ ಮತ ಹಾಕಿದ್ದರೂ ಅಥವಾ ಅವರಿಗೆ ಮತ ಹಾಕದಿದ್ದರೂ, ಅವರು ನನಗೂ ಪ್ರಧಾನಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನೀವು ಮತ ಹಾಕಿಲ್ಲ, ನೀವು ಕೇಳಬೇಡಿ ಎಂದು ಅವರು ಹೇಳಲು ಸಾಧ್ಯವಿಲ್ಲ. ಅವರು ಪ್ರಧಾನಿ ಹುದ್ದೆಯಿಂದ ಇಳಿದ ಕ್ಷಣ, ಮುಂದೆ ಯಾರು ಆ ಹುದ್ದೆಗೆ ಏರುತ್ತಾರೋ ಅವರನ್ನು ನಾನು ಕೇಳುತ್ತೇನೆ. ನನ್ನ ಟ್ವೀಟ್‌ಗಳು ಬದಲಾಗುವುದನ್ನು ನೀವು ನೋಡುತ್ತೀರಿ. ಅವರು (ಮೋದಿ) ಹೋದ ನಂತರ, ಅವರು ಹೋದರೆ, ನಾನು ಅವರ ಬಗ್ಗೆ ಏಕೆ ಮಾತನಾಡುತ್ತೇನೆ?' ಎಂದು ಅವರು ಹೇಳಿದರು.
'ನಾನು ನೆಹರು, ಹಿಟ್ಲರ್ ಬಗ್ಗೆ ಟ್ವೀಟ್ ಮಾಡುತ್ತೇನೆಯೇ, ಅವರು ನನಗೆ ಸಂಬಂಧಿಸಿದವರಲ್ಲ. ಎಂಟು ತಲೆಮಾರುಗಳ ಹಿಂದಿನ ಔರಂಗಜೇಬ್, ಟಿಪ್ಪು ಸುಲ್ತಾನ್ ಅವರಂತಹ ಬೇರೆಯವರ ಬಗ್ಗೆ ಮಾತನಾಡಿದರೆ ಜನರು ನನ್ನನ್ನು ಮೂರ್ಖ ಎಂದು ಕರೆಯುತ್ತಾರೆ. ಆಗ ನಾನು ಹುಟ್ಟಿರಲಿಲ್ಲ' ಎಂದರು.
ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್, ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ, ಅಮೆರಿಕದ ವೈದ್ಯ-ಲೇಖಕ ಅಬ್ರಹಾಂ ವರ್ಗೀಸ್, ಪ್ರಶಸ್ತಿ ಪುರಸ್ಕೃತ ಲೇಖಕ ಪೆರುಮಾಳ್ ಮುರುಗನ್ ಮತ್ತು ಹಾಸ್ಯನಟ ಕಾನನ್ ಗಿಲ್ ಸೇರಿದಂತೆ 400 ಪ್ರಸಿದ್ಧ ವ್ಯಕ್ತಿಗಳು ಕೇರಳ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿದ್ದು, ಭಾನುವಾರ ಮುಕ್ತಾಯಗೊಂಡಿತು.