ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ನೀಡಿದ ಸಂವಿಧಾನ ಪೀಠದ ಐವರು ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಹ್ವಾನ ನೀಡಿದೆ.
2019ರ ನ. 9ರಂದು ಐತಿಹಾಸಿಕ ತೀರ್ಪು ನೀಡಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಹಾಲಿ ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್, ನ್ಯಾ. ಎಸ್.ಎ.ಬೊಬ್ಡೆ, ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ. ಎಸ್.ಅಬ್ದುಲ್ ನಜೀರ್ ಅವರನ್ನು ಟ್ರಸ್ಟ್ ಆಹ್ವಾನಿಸಿದೆ.
ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ರಚಿಸಿದ ಟ್ರಸ್ಟ್‌ಗೆ ಈ ತೀರ್ಪು ಪ್ರೇರಣೆಯಾಯಿತು. ಜತೆಗೆ ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗವನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು.
ರಾಮಮಂದಿರದಲ್ಲಿ ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನ್ಯಾಯಾಂಗಕ್ಕೆ ಸೇರಿದ 50 ಪ್ರಮುಖರನ್ನು ಆಹ್ವಾನಿಸಲಾಗಿದೆ. ನ್ಯಾಯಾಧೀಶರು, ಪ್ರಮುಖ ವಕೀಲರು. ರಾಮಲಲ್ಲ ಪರ ವಕೀಲ ಕೆ. ಪರಸರಣ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಾಜಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹೆಸರು ಆಹ್ವಾನಿತರ ಪಟ್ಟಿಯಲ್ಲಿದೆ.
ದೇವಸ್ಥಾನ ಟ್ರಸ್ಟ್ ಪ್ರಕಾರ ಒಟ್ಟು 7 ಸಾವಿರ ಗಣ್ಯರನ್ನು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದರಲ್ಲಿ ರಾಜಕಾರಣಿಗಳು, ಸಿನಿಮಾ ನಟ, ನಟಿಯರು, ಕೈಗಾರಿಕೋದ್ಯಮಿಗಳು, ಸಂತರನ್ನು ಆಹ್ವಾನಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿಷ್ಟಾಚಾರ ವಿಭಾಗದ ವಿಶೇಷ ಕಾರ್ಯದರ್ಶಿ ಮೂಲಕವೇ ಗಣ್ಯರಿಗೆ ಆಹ್ವಾನಪತ್ರ ಕಳುಹಿಸಲಾಗಿದೆ.