ಅಲಿಘರ್: ನವದೆಹಲಿಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಕಂಪಾರ್ಟ್‌ಮೆಂಟ್‌ನಲ್ಲಿ ಚಲಿಸುತ್ತಿದ್ದ ವೇಳೆಯೇ ಚಳಿ ಕಾಯಿಸಿಕೊಳ್ಳಲು ಬೆಂಕಿ ಹೊತ್ತಿಸಿದ ಇಬ್ಬರ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ.
ರೈಲಿನಿಂದ ಹೊಗೆ ಹೊರಹೊಮ್ಮುತ್ತಿದ್ದ ಬಗ್ಗೆ ಗೇಟ್‌ಮ್ಯಾನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಹೊತ್ತಿಸಿದ ಇಬ್ಬರನ್ನು ಬಂಧಿಸಲಾಗಿದೆ.
ಅಲಿಘರ್ ರೈಲ್ವೆ ಸಂರಕ್ಷಣಾ ಪಡೆ(ಆರ್‌ಪಿಎಫ್) ಅಧಿಕಾರಿಯ ಪ್ರಕಾರ, ಜನವರಿ 3 ರಂದು ರಾತ್ರಿ ಬರ್ಹಾನ್ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಕ್ರಾಸಿಂಗ್‌ನಲ್ಲಿ ಕರ್ತವ್ಯದಲ್ಲಿದ್ದ ಗೇಟ್‌ಮ್ಯಾನ್ ರೈಲಿನ ಕೋಚ್‌ನಿಂದ ಬೆಳಕು ಮತ್ತು ಹೊಗೆ ಬರುತ್ತಿರುವುದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಬರ್ಹಾನ್ ರೈಲ್ವೆ ನಿಲ್ದಾಣದ ತಮ್ಮ ಮೇಲಧಿಕಾರಿಗಳಿಗೆ ಗೇಟ್ ಮ್ಯಾನ್ ಮಾಹಿತಿ ನೀಡಿದ್ದಾರೆ. ನಂತರ ಆರ್‌ಪಿಎಫ್ ತಂಡ ರೈಲನ್ನು ಮುಂದಿನ ನಿಲ್ದಾಣ ಚಾಮ್ರೌಲಾದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿದ್ದಾರೆ.
ತೀವ್ರವಾದ ಚಳಿ ಇತ್ತು. ಹೀಗಾಗಿ ಸಗಣಿ ಬೆರಣಿ ಬಳಸಿ ಜನರಲ್ ಕೋಚ್ ನಲ್ಲಿ ಬೆಂಕಿ ಹೊತ್ತಿಸಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ. ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತು ಮತ್ತು ನಂತರ ರೈಲು ಅಲಿಘರ್ ಜಂಕ್ಷನ್‌ಗೆ ತೆರಳಿತು. ಅಲ್ಲಿ 16 ಜನರನ್ನು ವಶಕ್ಕೆ ಪಡೆಯಲಾಗಿದೆ.
ಫರಿದಾಬಾದ್ ಚಂದನ್(23) ಮತ್ತು ದೇವೇಂದ್ರ (25) ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದ್ದು, ಇಬ್ಬರು ಯುವಕರು ಚಳಿ ಕಾಯಿಸಿಕೊಳ್ಳಲು ಬೆಂಕಿ ಹೊತ್ತಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅಲಿಘರ್ ರೈಲ್ವೆ ನಿಲ್ದಾಣದ ಆರ್‌ಪಿಎಫ್ ಕಮಾಂಡೆಂಟ್ ರಾಜೀವ್ ವರ್ಮಾ ಅನಪಿ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.