ಮುಳ್ಳೇರಿಯ: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ವತಿಯಿಂದ ಕಾಸರಗೋಡಿನ ಹಿರಿಯ ನ್ಯಾಯವಾದಿ, ಮುಚೂಣಿಯ ಕನ್ನಡ ಕಾಯಕದ ಕಟ್ಟಾಳು ಅಡೂರು ಉಮೇಶ ನಾಯ್ಕ್ ಅವರನ್ನು ಮನೆಗೆ ತೆರಳಿ ದಂಪತಿ ಸಹಿತ ಸನ್ಮಾನ ಗೌರವನೀಡಿ ಅಭಿನಂದಿಸಲಾಯಿತು. ಕ.ಸಾ.ಪದ ವತಿಯಿಂದ ಹಿರಿಯ ಕನ್ನಡ ಕಟ್ಟಾಳುಗಳಿಗೆ ಗೃಹಸನ್ಮಾನ ಗೌರವಾಭಿನಂಧನೆ ಸಲ್ಲಿಸಿ, ಅವರ ಬದುಕನ್ನು ದಾಖಲಿಸುವ ಯೋಜನೆಯಿದ್ದು, ತದಂಗವಾಗಿ ಅಡೂರು ಉಮೇಶ ನಾಯ್ಕ್ ಅವರ ಮನೆ ಸಂದರ್ಶಿಸಲಾಯಿತು.
ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಅವರ ಆಶಯದಂತೆ ಈ ಅಭಿಯಾನ ನಡೆಯಲಿದೆ. ಅಡೂರು ಉಮೇಶ ನಾಯ್ಕ್ ಹಾಗೂ ಅವರ ಶ್ರೀಮತಿ, ಕಾಸರಗೋಡು ಕನ್ನಡ ಮಹಿಳಾ ಸಂಘದ ನಾಯಕಿ ಲಲಿತಾ ನಾಯ್ಕ್ ಅವರನ್ನು ಜೊತೆಯಾಗಿ ಗೌರವಿಸಿದ ಗೃಹಸಮ್ಮಾನದಲ್ಲಿ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದರು. ಪತ್ರಕರ್ತ, ಲೇಖಕ ಎಂ.ನಾ. ಚಂಬಲ್ತಿಮಾರ್ ಅಭಿನಂದನಾ ಭಾಷಣ ಮಾಡಿದರು. ಗಮಕ ಕಲಾ ಪರಿಷತ್ ಅಧ್ಯಕ್ಷ ಟಿ.ಶಂಕರ ನಾರಾಯಣ ಭಟ್ ಅಡೂರು ಉಮೇಶ ನಾಯ್ಕರ ಕೊಡುಗೆಯನ್ನು ಮೆಲುಕಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ವಂದಿಸಿದರು. ಗೃಹಸನ್ಮಾನದಿಂದ ಆನಂದ ಪರವಶರಾದ ಅಡೂರು ಉಮೇಶ ನಾಯ್ಕರು ಬಾಳಿನ ಇಳಿಸಂಜೆಯಲ್ಲಿ ತಮ್ಮನ್ನರಸಿ ಬಂದುದಕ್ಕೆ ಮುದಗೊಂಡು ಆಶೀರ್ವದಿಸಿದರು.