'ಭಗವಾನ್ ಶ್ರೀ ರಾಮನ ಭಕ್ತರಿಗಷ್ಟೇ ಆಹ್ವಾನ ನೀಡಲಾಗಿದೆ' ಎಂದು ಅವರು ಹೇಳಿದ್ದಾರೆ.
'ಭಗವಂತ ರಾಮನ ಭಕ್ತರಿಗೆ ಮಾತ್ರವೇ ಆಮಂತ್ರಣ ನೀಡಲಾಗಿದೆ. ಬಿಜೆಪಿಯು ಶ್ರೀ ರಾಮನ ಹೆಸರಿನಲ್ಲಿ ಹೋರಾಟ ನಡೆಸುತ್ತಿದೆ ಎಂಬುದು ಸಂಪೂರ್ಣ ತಪ್ಪು. ನಮ್ಮ ಪ್ರಧಾನಿ (ನರೇಂದ್ರ ಮೋದಿ) ಅವರನ್ನು ಎಲ್ಲೆಡೆ ಗೌರವಿಸಲಾಗುತ್ತದೆ. ಅವರು ತಮ್ಮ ಆಡಳಿತಾವಧಿಯಲ್ಲಿ ಅದ್ಭುತವಾದ ಕೆಲಸ ಮಾಡಿದ್ದಾರೆ. ಇದು (ರಾಮ ಮಂದಿರ ನಿರ್ಮಾಣ) ರಾಜಕೀಯದ ವಿಚಾರವಲ್ಲ. ಅವರಲ್ಲಿನ ಶ್ರದ್ಧೆಗೆ ಸಾಕ್ಷಿ' ಎಂದು ಆಚಾರ್ಯ ದಾಸ್ ಹೇಳಿದ್ದಾರೆ.
ರಾಮ ಮಂದಿರದಲ್ಲಿ ಜನವರಿ 16ರಿಂದ ಆರಂಭವಾಗಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ 7 ದಿನಗಳ ವರೆಗೆ ಅಂದರೆ ಜನವರಿ 22ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಖ್ಯಾತನಾಮರು ಹಾಗೂ ರಾಜಕೀಯ ನಾಯಕರಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಮಂತ್ರಣ ನೀಡಿದೆ.
'ಆಹ್ವಾನ ಬಂದಿಲ್ಲ, ಅದರ ಅಗತ್ಯವಿಲ್ಲ
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಠಾಕ್ರೆ, 'ದೇವಾಲಯ ಉದ್ಘಾಟನೆಯು ರಾಜಕೀಯ ಕಾರ್ಯಕ್ರಮವಾಗದಿರಲಿ ಎಂದು ವಿನಂತಿಸುತ್ತೇನೆ. ಶ್ರೀ ರಾಮ ಯಾವುದೇ ರಾಜಕೀಯ ಪಕ್ಷದ ಆಸ್ತಿಯಲ್ಲ' ಎಂದು ಹೇಳಿದ್ದರು.
ಶಿವಸೇನಾ (ಉದ್ಧವ್ ಠಾಕ್ರೆ ಬಣ) ನಾಯಕರೂ ಆಗಿರುವ ಉದ್ಧವ್, 'ಶ್ರೀರಾಮ ನಮ್ಮೆಲ್ಲರಿಗೂ ಸೇರಿದವ. ನಾನು ಬಯಸಿದಾಗೆಲ್ಲ ಅಯೋಧ್ಯೆಗೆ ಹೋಗಬಲ್ಲೆ. ಅದು ಈಗಲಾದರೂ ಸರಿ, ನಾಳೆಗಾದರೂ ಸರಿ. ನಾನು ಮುಖ್ಯಮಂತ್ರಿಯಾದಾಗ ಅಯೋಧ್ಯೆಗೆ ಹೋಗಿದ್ದೆ. ಅದಕ್ಕಿಂತ ಹಿಂದೆಯೂ ಭೇಟಿ ನೀಡಿದ್ದೆ' ಎಂದಿದ್ದರು.
ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಅವರು, 'ಆಹ್ವಾನ ಬಂದಿಲ್ಲ. ಆದರೆ, ಅಯೋಧ್ಯೆಗೆ ತೆರಳಲು ಯಾರ ಅಹ್ವಾನವೂ ಬೇಕಿಲ್ಲ' ಎಂದು ಪ್ರತಿಪಾದಿಸಿದ್ದರು.