ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರಪ್ರಸಾರವನ್ನು ತಮಿಳುನಾಡಿನ ಎಲ್ಲ ದೇವಾಲಯಗಳಲ್ಲಿ ನಿಷೇಧಿಸುವಂತೆ ಜನವರಿ 20ರ ಮೌಖಿಕ ಆದೇಶ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು, ಮೌಖಿಕ ಆದೇಶಗಳಿಗೆ ಯಾರೂ ಬದ್ಧರಲ್ಲ ಎಂದು ಹೇಳಿದೆ.
ಈ ನಡುವೆ, ತಮಿಳುನಾಡಿನ ದೇಗುಲಗಳಲ್ಲಿ ರಾಮನ ಪ್ರತಿಷ್ಠಾಪನೆ ನೇರ ಪ್ರಸಾರ ಅಥವಾ ಅದೇ ಸಂದರ್ಭ ಪೂಜೆ, ಅರ್ಚನೆಗೆ ಯಾವುದೇ ನಿರ್ಬಂಧ ಹೇರಲಾಗಿಲ್ಲ ಎಂಬ ತಮಿಳುನಾಡು ಪರ ವಕೀಲ ಅಮಿತ್ ಆನಂದ್ ತಿವಾರಿ ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿತು.
ಈ ಅರ್ಜಿಯು ರಾಜಕೀಯಪ್ರೇರಿತವಾಗಿದೆ ಎಂದು ವಕೀಲರು ಆರೋಪಿಸಿದರು.
ದೇವಾಲಯಗಳಲ್ಲಿ ಪೂಜೆ ಅರ್ಚನೆ ಮತ್ತು ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅನುಮತಿಸಲಾದ ಮತ್ತು ಅನುಮತಿಸದ ಅರ್ಜಿಗಳ ಕುರಿತಾದ ದತ್ತಾಂಶ ಮತ್ತು ಕಾರಣಗಳನ್ನು ದಾಖಲಿಸಲು ಅಧಿಕಾರಿಗಳಿಗೆ ಪೀಠವು ತಿಳಿಸಿದೆ.
'ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆ ಇತ್ಯಾದಿಗಳ ಅನುಮತಿಗಾಗಿ ಯಾವುದೇ ಅರ್ಜಿಯನ್ನು ಪರಿಶೀಲಿಸುವಾಗ ಅಧಿಕಾರಿಗಳು, ಕಾನೂನಿನ ಅನುಸಾರವಾಗಿ ಮುಂದುವರಿಯಬೇಕು. ಅರ್ಜಿಯನ್ನು ತಿರಸ್ಕರಿಸಲು ಕಾರಣಗಳನ್ನು ದಾಖಲಿಸಬೇಕು. ಸ್ವೀಕರಿಸಿದ ಅರ್ಜಿಗಳು ಮತ್ತು ಅನುಮತಿ ನೀಡಿದ ಅಥವಾ ನೀಡದಿರುವ ಕಾರಣಗಳ ಬಗ್ಗೆ ಅಧಿಕಾರಿಗಳು ದತ್ತಾಂಶವನ್ನು ಇಟ್ಟುಕೊಂಡಿರಬೇಕು. ಅಂತಹ ಅರ್ಜಿಗಳ ಪರಿಶೀಲನೆ ವೇಳೆ ಅಧಿಕಾರಿಗಳು ಕಾನೂನು ಮತ್ತು ನ್ಯಾಯಾಲಯಗಳ ತೀರ್ಪುಗಳ ಮೂಲಕ ನಿಗದಿಪಡಿಸಿದ ಸಂಬಂಧಿತ ಮಾನದಂಡಗಳನ್ನು ಅನುಸರಿಬೇಲು ಎಂದು' ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಭಾರತದ ಸಂವಿಧಾನವು ಇಡೀ ದೇಶಕ್ಕೆ ಅನ್ವಯವಾಗುತ್ತದೆ ಮತ್ತು ಅದು ತಮಿಳುನಾಡು ರಾಜ್ಯಕ್ಕೂ ಅನ್ವಯಿಸುತ್ತದೆ ಎಂಬ ಬಲವಾದ ಸಂದೇಶವು ದೇಶದ ಅತ್ಯುನ್ನತ ನ್ಯಾಯಾಂಗದಿಂದ ರಾಜ್ಯ ಸರ್ಕಾರಕ್ಕೆ ಹೋಗಬೇಕು' ಎಂದು ಹೇಳಿದರು.
ಧಾರ್ಮಿಕ ಆಚರಣೆಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.