ಅಹಮದಾಬಾದ್: ಅಯೋಧ್ಯೆಯ ರಾಮಮಂದಿರದಲ್ಲಿನ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಉತ್ತರ ಗುಜರಾತ್‌ನ ಮೆಹಸಾಣ ಜಿಲ್ಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶೋಭಾ ಯಾತ್ರೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖೇರಾಲು ನಗರದ ಬೇಲಿಮ್ ವಾಸ್‌ನ ಹತಾಡಿಯಾ ಪ್ರದೇಶದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲು ತೂರಾಟದಲ್ಲಿ ತೊಡಗಿದ್ದ ಎರಡೂ ಸಮುದಾಯಗಳ ಗುಂಪನ್ನು ಚದುರಿಸಲು ಕನಿಷ್ಠ ಮೂರು ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ಬರದ ಸಂಗೀತ ಹಾಕಿಕೊಂಡು, ಪಟಾಕಿ ಸಿಡಿಸಿದ್ದಕ್ಕೆ ಸ್ಥಳೀಯರು ಕಲ್ಲು ತೂರಿದ್ದಾರೆ ಎಂದು ಹೇಳಲಾಗಿದೆ. ಬೇಲಿಮ್ ವಾಸ್ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪ್ರದೇಶವಾಗಿದೆ.
ಮನೆಯ ಚಾವಣಿಯಿಂದ ಕಲ್ಲುಗಳನ್ನು ಎಸೆಯುತ್ತಿರುವ ದೃಶ್ಯಗಳ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.