ಉಡುಪಿ: ಕಲೆ ಸಾಹಿತ್ಯಾಸಕ್ತಿಯಿಂದ 30ಕ್ಕೂ ಹೆಚ್ಚು ಪ್ರಸಂಗಗಳನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅಗರಿ ಭಾಸ್ಕರ ರಾವ್(76) ಇಂದು ಬೆಂಗಳೂರಿನಲ್ಲಿ ನಿಧನರಾದರು.
ಯಕ್ಷಗಾನದ ಪ್ರಸಿದ್ಧ ಭಾಗವತರಾಗಿದ್ದ ಅಗರಿ ಶ್ರೀನಿವಾಸ ಭಾಗವತರ ಸುಪುತ್ರರಲ್ಲಿ ಹಿರಿಯರಾದ ರಘುರಾಮರು ಪ್ರಸಿದ್ಧ ಭಾಗವತರಾದರೆ ತಂದೆಯ ಇನ್ನೊಂದು ಪ್ರವೃತ್ತಿಯಾದ ಪ್ರಸಂಗ ರಚನೆಯನ್ನು ಮುಂದುವರಿಸಿ ಹಲವು ಪ್ರಸಂಗಗಳನ್ನು ಬರೆದಿದ್ದರು.
ಶ್ರೀವಿಶ್ವಕರ್ಮ ಮಹಾತ್ಮೆ, ಶ್ರೀಹರಿ ಲೀಲಾರ್ಣವ, ಶ್ರೀದೇವಿ ತ್ರಿಕರ್ಣೇಶ್ವರೀ ಮಹಾತ್ಮೆ, ಶ್ರೀಗುಂಡುಬಾಳ ಕ್ಷೇತ್ರ ಮಹಾತ್ಮೆ, ರಾಣೀ ಅಪ್ರಮೇಯಿ ಸೇರಿದಂತೆ ಅವರ ಹಲವು ಪ್ರಸಂಗಗಳು ರಂಗದಲ್ಲಿ ವಿಜೃಂಭಿಸಿವೆ. ತುಳು ಭಾಷೆಯಲ್ಲೂ ಪ್ರಸಂಗ ರಚಿಸಿದ್ದಾರೆ.
2018ರಲ್ಲಿ 'ಯಕ್ಷಗಾನ ಪ್ರಸಂಗ ದಶಕ' ಶೀರ್ಷಿಕೆಯಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ಟರ ಸಂಪಾದಕತ್ವದಲ್ಲಿ ಉಡುಪಿಯ ಶೇವಧಿ ಪ್ರಕಾಶನದಿಂದ ಹತ್ತು ಪ್ರಸಂಗಗಳಗುಚ್ಛ ಪ್ರಕಟವಾಗಿತ್ತು. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಸಂಸ್ಥೆಯ ಆಜೀವ ಸದಸ್ಯರಾದ ಭಾಸ್ಕರ್ ರಾವ್ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.