ಕಾಸರಗೋಡು: ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಶಿಫಾರಸು ನೀಡಿದ್ದ ಡಾ. ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದ್ದಾರೆ.
ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಎಡನೀರು ಮಠದ ಸಭಾಂಗಣದಲ್ಲಿ ನಿನ್ನೆ ಆಯೋಜಿಸಿದ್ದ ಕೇರಳ ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವ ಬಗ್ಗೆ ವರದಿಯಲ್ಲಿ ಸ್ಪಷ್ಟ ಉಲ್ಲೇಖವಿದ್ದು, ಈ ಬಗ್ಗೆ ಪುನ:ಪರಿಶೀಲನೆ ನಡೆಸಿ ಮುಂದಿನ ಅಧಿವೇಶನದಲ್ಲಿ ವರದಿ ಮಂಡಿಸಲಾಗುವುದು ಎಂದು ತಿಳಿಸಿದರು. ಗಡಿನಾಡು ಹಾಗೂ ಹೊರನಾಡ ಕನ್ನಡಿಗರ ಸಮಸ್ಯೆಗಳಿಗೆ ಸರ್ಕಾರ ಸದಾ ಸ್ಪಂದಿಸುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಶ್ರೀಮಂತ ಭಾಷೆಯಾಗಿ ಉಳಿದುಕೊಂಡಿದೆ. ಕನ್ನಡದ ಅಚ್ಚ ನೆಲವಾಗಿ ಉಳಿದುಕೊಂಡಿರುವ ಕಾಸರಗೋಡು ಭಾಷಾ ಸಾಮರಸ್ಯಕ್ಕೆ ಮಹತ್ವದ ಕೊಡುಗೆ ನೀಡಿದೆ. ಎಡನೀರು ಮಠ ಕನ್ನಡ ಭಾಷೆ, ಸಂಸ್ಕøತಿ, ಕಲೆಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ತಿಳಿಸಿದರು.
ಪ್ರಶಸ್ತಿ ಬಾಕಿ ಉಳಿಸಿಕೊಂಡ ಸರ್ಕಾರ:
ಕಳೆದ ಮೂರು ವರ್ಷಗಳಿಂದ ಗಡಿನಾಡು ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ನೀಡುವಲ್ಲಿ ಈ ಹಿಂದಿನ ಸರ್ಕಾರ ವಿಫಲವಾಗಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ, ಈ ಕಾಲಾವಧಿಯ ಪ್ರಶಸ್ತಿಗಳನ್ನು ಒಂದೇ ಬಾರಿಗೆ ನೀಡುವ ವ್ಯವಸ್ಥೆ ಮಾಡಿರುವುದಾಗಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿ, ಗಡಿನಾಡ ಕನ್ನಡಿಗರು ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ನಿರಂತರ ಸವಾಲುಗಳ ಮಧ್ಯೆ ಜೀವನ ಸಾಗಿಸಬೇಕಾದ ಅನಿವಾರ್ಯತೆಯಿದೆ. ಭಾಷೆ, ಸಂಸ್ಕøತಿಯ ಉಳಿವಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಗಡಿನಾಡ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಸವಲತ್ತು, ಸಹಕಾರ ಇಲ್ಲಿನ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತಿರುವುದಾಗಿ ತಿಳಿಸಿದರು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡ ಕನ್ನಡಿಗರಿಗೆ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸದಾ ನೆರವು ಒದಗಿಸುತ್ತಿರುವ ಕರ್ನಾಟಕ ಸರ್ಕಾರದ ಕೊಡುಗೆ ಶ್ಲಾಘನೀಯವಾದುದು. ಉಭಯ ಭಾಷಿಗರ ನಡುವೆ ಹೊಂದಿರುವ ಭಾಷಾ ಸಾಮರಸ್ಯ ಮುಂದುವರಿಯುವಂತಾಗಲಿ ಎಂದು ಹಾರೈಸಿದರು. ಉದುಮ ಶಾಸಕ ಸಿ.ಎಚ್ ಕುಞಂಬು, ಕಾಸರಗೋಡು ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷೆ ವಕೀಲೆ ಸರಿತಾ, ಜಿಪಂ ಸದಸ್ಯೆ ಶೈಲಜಾ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಕೀಲ ಐ. ಸುಬ್ಬಯ್ಯ ರೈ, ಕಸಾಪ ಗಡಿನಾಡ ಘಟಕ ಅಧ್ಯಕ್ಷ ಜಯಪ್ರಕಾಶ್‍ನಾರಾಯಣ ತೊಟ್ಟೆತ್ತೋಡಿ, ಕಾಸರಗೊಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ, ಚೆಂಗಳ ಗ್ರಾಪಂ ಅಧ್ಯಕ್ಷ ಸಲೀಂ ಸಾಹೇಬ್ ಚೆಂಗಳ, ರಾಜ್‍ಕುಮಾರ್ ಶೆಟ್ಟಿ ಬಹರೈನ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್.ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ಗಡಿಯಾಚೆಯೂ ಸಾಧನೆ ಮಾಡಿದ ಪ್ರತಿಭಾನ್ವಿತ ಕನ್ನಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಮಾರಂಭ ಆಯೋಜಿಸಲಾಗುತ್ತಿದ್ದು, ಒಟ್ಟು 98ಮಂದಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪ್ರದಾನ ನಡೆಸಲಾಯಿತು.