ನವದೆಹಲಿ: ಬಿಜೆಪಿ ಹಿರಿಯ ನಾಯಕ, ಅಯೋಧ್ಯೆಯಲ್ಲಿ ರಾಮ ಮಂದಿರವಾಗಲು ಪ್ರಮುಖ ಕಾರಣಕರ್ತರಾದ ಎಲ್‌ಕೆ ಅಡ್ವಾಣಿ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ದೃಢಪಡಿಸಿದ್ದಾರೆ.
96ರ ಹರೆಯದ ಎಲ್‌ಕೆ ಅಡ್ವಾಣಿ ಅವರು ರಾಮ ಜನ್ಮಭೂಮಿ ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕರಲ್ಲಿ ಒಬ್ಬರಾಗಿರುವ ಕಾರಣ ರಾಮಮಂದಿರ 'ಪ್ರಾಣ ಪ್ರತಿಷ್ಠಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವರ ನಿರ್ಧಾರ ಇಲ್ಲಿ ಪ್ರಮುಖವಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಡಿಸೆಂಬರ್‌ನಲ್ಲಿ ಬಿಜೆಪಿ ಹಿರಿಯರಾದ ಎಲ್‌ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರನ್ನು ವಿಎಚ್‌ಪಿ ಆಹ್ವಾನಿಸಿತ್ತು. ಆದರೆ, ಎಲ್‌ಕೆ ಅಡ್ವಾಣಿ ಮತ್ತು 89ರ ಹರೆಯದ ಮುರಳಿ ಮನೋಹರ್ ಜೋಷಿ ಅವರ ಆರೋಗ್ಯದ ಕಾರಣದಿಂದ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ದೇವಸ್ಥಾನದ ಟ್ರಸ್ಟ್ ಹೇಳಿತ್ತು.
ಆದರೆ ಈಗ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಯೋಧ್ಯೆಯಲ್ಲಿ ಅವರ ಭಾಗವಹಿಸುವಿಕೆ ಕುರಿತು ಮಾತನಾಡಿದ ವಿಹೆಚ್ ಪಿಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಎಲ್‌ಕೆ ಅಡ್ವಾಣಿ ಅವರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಸೀಮಿತ ಆಹ್ವಾನಿತರೊಂದಿಗೆ, ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ. ಸಮಾರಂಭಕ್ಕೆ ದೇಶಾದ್ಯಂತದ ಸಾವಿರಾರು ವೀಕ್ಷಕರನ್ನು ಆಹ್ವಾನಿಸಲಾಗಿದೆ. ಆಹ್ವಾನಿತರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಿದ ಕಾರ್ಮಿಕರ ಕುಟುಂಬಗಳೂ ಒಳಗೊಂಡಿರುತ್ತಾರೆ.