ನವದೆಹಲಿ: ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಸಂವಿಧಾನವು ರಾಷ್ಟ್ರೀಯ ಮಹತ್ವ ನೀಡಿದೆ. ಹೀಗಾಗಿ ಈ ವಿ.ವಿಯು ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸೇರುವುದಿಲ್ಲ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ಎಎಂಯುಗೆ ನೀಡಿದ್ದ 'ಅಲ್ಪಸಂಖ್ಯಾತ' ಸ್ಥಾನಮಾನವನ್ನು ರದ್ದುಪಡಿಸಿ ಅಲಹಾಬಾದ್ ಹೈಕೋರ್ಟ್ 2006ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಈ ಹಿಂದಿನ ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ತನ್ನ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ಎಎಂಯುವನ್ನು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಎಂದು ಘೋಷಿಸಿದರೆ ಸರ್ಕಾರದ ಮೀಸಲಾತಿ ನೀತಿಯಿಂದ ವಿ.ವಿಯನ್ನು ಹೊರಗಿಡಬೇಕಾಗುತ್ತದೆ. ಪ್ರತ್ಯೇಕ ದಾಖಲಾತಿ ನಿಯಮ ರೂಪಿಸಬೇಕಾಗುತ್ತದೆ. ಇದರಿಂಗಾಗಿ ವಿ.ವಿಯ ಇತಿಹಾಸ ಮತ್ತು ಮೇಲ್ದರ್ಜೆಯ ಮೇಲೆ ಗುರುತರ ಪರಿಣಾಮ ಉಂಟಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ಗೆ ಹೇಳಿದರು.
ಪ್ರಕರಣದ ಹಿನ್ನೆಲೆ: ಎಎಂಯುವನ್ನು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ ಎಂದು ಘೋಷಿಸುವ ಕುರಿತು 1967ರಿಂದಲೂ ಕಾನೂನು ಹೋರಾಟ ನಡೆಯುತ್ತಿದೆ. ಈ ಹೋರಾಟವನ್ನು 'ಎಸ್. ಅಝೀಝ್ ಬಾಷಾ ಮತ್ತು ಎಎನ್‌ಆರ್ ವರ್ಸಸ್ ಕೇಂದ್ರ ಸರ್ಕಾರ' ಎಂದೇ ಕರೆಯಲಾಗುತ್ತದೆ.
ಎಎಂಯು ಕೇಂದ್ರೀಯ ವಿ.ವಿ ಆಗಿರುವ ಕಾರಣ ಇದನ್ನು ಅಲ್ಪಸಂಖ್ಯಾತರ ಸಂಸ್ಥೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು 1967ರಲ್ಲಿ ತೀರ್ಪು ನೀಡಿತ್ತು.
1981ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮೂಲಕ ಅಂದಿನ ಕೇಂದ್ರ ಸರ್ಕಾರವು ಎಎಂಯುಗೆ 'ಅಲ್ಪಸಂಖ್ಯಾತ' ಸ್ಥಾನಮಾನ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ಈ ಸ್ಥಾನಮಾನವನ್ನು ರದ್ದುಪಡಿಸಿ 2006ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ವಿ.ವಿ ಕೂಡಾ ಆದೇಶ ಪ್ರಶ್ನಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು.