ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತಿಯ ಸೀತಾಂಗೋಳಿ ಸಮೀಪದ ಎಡನಾಡು ಸಾರಡಿ ಪ್ರದೇಶದ ಜನರ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ವಾರ್ಡ್ ಸದಸ್ಯೆ ಕಾವ್ಯಶ್ರೀ ಬಿ.ಕೆ ಅವರು ಕಾಸರಗೋಡು ಅಭಿವೃದ್ದಿ ಪ್ಯಾಕೇಜ್ ಅಧಿಕೃತರಿಗೆ ಮನವಿ ನೀಡಿ ಒತ್ತಾಯಿಸಿರುವರು.
ಸುಮಾರು 25ರಷ್ಟು ಕುಟುಂಬಗಳು ವಾಸಿಸುವ ಸಾರಡಿ ಪ್ರದೇಶವು ಮಳೆಗಾಲದಲ್ಲಿ ಹರಿಯುತ್ತಿರುವ ಹೊಳೆಯಿಂದಾಗಿ ಹೊರ ಜಗತ್ತಿಗೆ ಸಂಪರ್ಕವನ್ನು ಸಾಧಿಸಲು ಕಷ್ಟ ಸಾಧ್ಯವಾದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 76 ವರ್ಷಗಳ ನಂತರವೂ ಈ ಪ್ರದೇಶಕ್ಕೆ ಸೇತುವೆ ನಿರ್ಮಾಣ ಆಗದಿರುವುದು ವಿಪರ್ಯಾಸ ಎಂದು ಅವರು ಮನವಿಯಲ್ಲಿ ಬೊಟ್ಟುಮಾಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಗ್ರಾಮ ಪಂಚಾಯತಿ, ಬ್ಲಾಕ್ ಪಂಚಾಯತಿ, ಜಿಲ್ಲಾ ಪಂಚಾಯತಿ, ಶಾಸಕರು, ಸಂಸದದರು, ರಾಜ್ಯ ಸರ್ಕಾರ ಮುಂತಾದವರಿಗೆ ಮನವಿಗಳನ್ನು ನೀಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಲಭಿಸದಿರುವುದು ದುರ್ದೈವ. ಈ ಹಿನ್ನೆಲೆಯಲ್ಲಿ ಈಗಾಗಲೇ ಯೋಜನಾ ವರದಿ ತಯಾರಾಗಿರುವ ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿನಲ್ಲಿ ಒಳಪಡಿಸಿಯಾದರು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದ್ದ ಹಿನ್ನೆಲೆಯಲ್ಲಿ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಬೇಕೆಂದು ವಿನಂತಿಸಿಕೊಂಡರು.
ಮನವಿ ನೀಡುವ ವೇಳೆ ಪುತ್ತಿಗೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಿಶ್ವನಾಥ ಜಿ, ಸಾಮಾಜಿಕ ಕಾರ್ಯಕರ್ತ ದಿವಾಕರ ಆಚಾರ್ಯ ಸೀತಾಂಗೋಳಿ, ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಸ್ವಾಗತ್ ಸೀತಾಂಗೋಳಿ, ಯಜ್ಞೇಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.