ಕಾಸರಗೋಡು: ತಲಪಾಡಿಯಿಂದ ತಿರುವನಂತಪುರದ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಅಭಿವೃದ್ಧಿಯ ಬೆನ್ನಿಗೆ ಸಮಸ್ಯೆ ಕೂಡ ಎದುರಾಗಿದೆ. ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣ ಪರಿಸರದಿಂದ ಅಣಂಗೂರಿನ ವರೆಗೆ ಎಲ್ಲೂ ರಸ್ತೆ ದಾಟಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಕರಂದಕ್ಕಾಡ್ ಸರ್ಕಲ್ ಬಳಿಕ ಅಣಂಗೂರಿನಲ್ಲಿ ಜನರು ಸಾಗಲು ಅಂಡರ್ ಪಾಸ್ ಇದೆ. ಈ ಮಧ್ಯೆ ಸುಮಾರು ಒಂದೂವರೆ ಕಿ.ಮೀ. ದೂರಕ್ಕೆ ಅಂಡರ್ ಪಾಸ್ ಇಲ್ಲ. ಇದರಿಂದಾಗಿ ಅತ್ಯಗತ್ಯ ಸಂದರ್ಭಗಳಲ್ಲಿ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ರಸ್ತೆ ದಾಟಲು ವ್ಯವಸ್ಥೆಯಿಲ್ಲದಿರುವುದರಿಂದ ಪಾದಚಾರಿಗಳು ಹಾಗು ವಾಹನಗಳೂ ಸಂಕಷ್ಟಕ್ಕೆ ಸಿಲುಕಲಿದೆ. ರಸ್ತೆ ದಾಟಬೇಕಾದರೆ ಸುಮಾರು ಒಂದೂವರೆ ಕಿ.ಮೀ. ದೂರದ ವರೆಗೆ ಸಾಗಬೇಕಾಗತ್ತದೆ. ಇದು ಪಾದಚಾರಿಗಳಿಗೆ ಹಾಗು ವಾಹನಗಳಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡಲಿದೆ.
ರಾಷ್ಟ್ರೀಯ ಹೆದ್ದಾರಿ ಸುಮಾರು 45 ಮೀಟರ್ ಅಗಲದಲ್ಲಿ ಅಭಿವೃದ್ಧಿಯಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟೆ ಕಟ್ಟಿರುವುದರಿಂದ ಕರಂದಕ್ಕಾಡ್‍ನಿಂದ ಅಣಂಗೂರು ವರೆಗೆ ಎಲ್ಲೂ ರಸ್ತೆಯನ್ನು ದಾಟುವ ಹಾಗಿಲ್ಲ. ಇದರಿಂದಾಗಿ ಹೆದ್ದಾರಿಯ ಇಕ್ಕೆಲಗಳಲ್ಲಿರುವ ಜನರು, ಪಾದಚಾರಿಗಳು, ವಾಹನಗಳು ಸಮಸ್ಯೆಗೆ ತುತ್ತಾಗಲಿದೆ. ಕರಂದಕ್ಕಾಡ್‍ನಿಂದ ಅಣಂಗೂರು ಮಧ್ಯೆ ಹಲವು ಆಸ್ಪತ್ರೆಗಳು, ಶಾಲೆ, ದೇವಸ್ಧಾನ, ಇಗರ್ಜಿ, ಮಸೀದಿ, ಮಂದಿರ ಮೊದಲಾದ ಆರಾಧನಾ ಕೇಂದ್ರಗಳು, ಅಂಗಡಿ ಮುಗ್ಗಟ್ಟುಗಳು ಇವೆ. ಆಸ್ಪತ್ರೆಗೆ ಹೋಗಬೇಕಾದರೆ ಒಂದೂವರೆ ಕಿ.ಮೀ. ದೂರಕ್ಕೆ ಸಾಗಿ ರಸ್ತೆಯ ಇನ್ನೊಂದು ಮಗ್ಗಲಿಗೆ ಸಾಗಲು ಸಾಧ್ಯವಾಗುವುದು. ಆಸ್ಪತ್ರೆಗೆ ತುರ್ತಾಗಿ ರೋಗಿಗಳನ್ನು ಸಾಗಿಸಬೇಕಿದ್ದಲ್ಲಿ ಇಷ್ಟು ದೂರ ಸಾಗಿ ತೆರಳುವುದರಿಂದ ರೋಗಿಗಳಿಗೆ ಅಪಾಯ ಸಾಧ್ಯತೆ ಹೆಚ್ಚು. ಶಾಲಾ ವಿದ್ಯಾರ್ಥಿಗಳೂ ಸಮಸ್ಯೆಗೆ ತುತ್ತಾಗಲಿದ್ದಾರೆ. ಈ ನಿಟ್ಟಿನಲ್ಲಿ ಕರಂದಕ್ಕಾಡ್‍ನಿಂದ ಅಣಂಗೂರು ಮಧ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್‍ಅತ್ಯಗತ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ.
ಧರಣಿ : ಹೊಸ ಬಸ್ ನಿಲ್ದಾಣದಿಂದ ಅಣಂಗೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಸಾಧ್ಯವಾಗದಿರುವುದರಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ನುಳ್ಳಿಪ್ಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಿಸಬೇಕಾದ ಅನಿವಾರ್ಯತೆ ಇದೆ. ಈ ಬೇಡಿಕೆಗಳನ್ನು ಮುಂದಿಟ್ಟು `ನುಳ್ಳಿಪಾಡಿ ಅಂಡರ್ ಪಾಸ್ ಕ್ರಿಯಾ ಸಮಿತಿ' ರಚಿಸಿದ್ದು, ನಿನ್ನೆ ಬೆಳಗ್ಗೆ 10 ರಿಂದ ಧರಣಿ ಸತ್ಯಾಗ್ರಹ ನಡೆಯಿತು. ಧರಣಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.