ನವದೆಹಲಿ : ಕುಲಾಂತರಿ ತಳಿಗಳನ್ನು ಮುಕ್ತ ಬಳಕೆಗೆ ಬಿಡುಗಡೆ ಮಾಡುವುದಕ್ಕೆ ತಾತ್ಕಾಲಿಕ ನಿಷೇಧ ಹೇರಬೇಕು ಎಂಬ ಕೋರಿಕೆ ಇರುವ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸಂಜಯ್ ಕರೋಲ್ ಅವರು ಇರುವ ವಿಭಾಗೀಯ ಪೀಠವು ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಸಂಜಯ್ ಪಾರೀಖ್ ಅವರ ವಾದಗಳನ್ನು ಆಲಿಸಿತು.
ಕುಲಾಂತರಿ ತಳಿಗಳ ವಿಚಾರವು ವಿಜ್ಞಾನಕ್ಕೆ ಸಂಬಂಧಿಸಿದೆ ಎಂದು ಹೇಳಿರುವ ಪೀಠವು, ಈ ತಳಿಗಳನ್ನು ಮುಕ್ತ ಬಳಕೆಗೆ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ದೇಶಕ್ಕೆ ಯಾವುದು ಒಳಿತು ಎಂಬುದರ ಆಧಾರದಲ್ಲಿ ಇತ್ಯರ್ಥಪಡಿಸುವುದಾಗಿ ತಿಳಿಸಿದೆ.
ಕುಲಾಂತರಿ ಬೆಳೆಗಳು ಮನುಷ್ಯನ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲಿಸಲು ಕೋರ್ಟ್ ನೇಮಕ ಮಾಡಿದ ತಾಂತ್ರಿಕ ತಜ್ಞರ ಸಮಿತಿಯ ವರದಿಗಳನ್ನು 'ಕುಲಾಂತರಿತಳಿ ಎಂಜಿನಿಯರಿಂಗ್ ಪರಿಶೀಲನಾ ಸಮಿತಿ'ಯು (ಜಿಇಎಸಿ) ಏಕೆ ಗಮನಿಸಿಲ್ಲ ಎಂದು ಕೋರ್ಟ್, ಕೇಂದ್ರ ಸರ್ಕಾರವನ್ನು ಈ ಹಿಂದೆ ಪ್ರಶ್ನಿಸಿತ್ತು.
ಕುಲಾಂತರಿ ಸಾಸಿವೆಯನ್ನು ಹೊಲಗದ್ದೆಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡಲು 2022ರ ಅಕ್ಟೋಬರ್‌ನಲ್ಲಿ ಅನುಮತಿ ನೀಡುವ ಮೊದಲು ಜಿಇಎಸಿ ಅಥವಾ ತಜ್ಞರ ಯಾವುದೇ ಉಪಸಮಿತಿಯು, ಕೋರ್ಟ್ ನೇಮಕ ಮಾಡಿದ್ದ ತಾಂತ್ರಿಕ ತಜ್ಞರು ಸಲ್ಲಿಸಿದ ವರದಿಯನ್ನು ಪರಿಶೀಲಿಸಿತ್ತೇ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ವೆಂಕಟರಮಣಿ ಅವರಿಗೆ ಪೀಠವು ಕೇಳಿತ್ತು.
ಶಾಸನಾತ್ಮಕ ಸ್ಥಾನ ಹೊಂದಿರುವ ಜಿಇಎಸಿ ಇಂತಹ ವರದಿಗಳನ್ನು ಪರಿಶೀಲಿಸಬೇಕಾದ ಅಗತ್ಯ ಇಲ್ಲ. ಹೀಗಿದ್ದರೂ, ಅದು ಕುಲಾಂತರಿ ತಳಿಯ ವ್ಯಾಪಕ ಬಳಕೆಗೆ ಅನುಮತಿ ನೀಡುವ ಮೊದಲು ಅಗತ್ಯವಿರುವ ಎಲ್ಲ ವೈಜ್ಞಾನಿಕ ಮಾಹಿತಿ ಪರಿಗಣಿಸಿದೆ ಎಂದು ವೆಂಕಟರಮಣಿ ಅವರು ಪೀಠಕ್ಕೆ ವಿವರಿಸಿದ್ದರು.
ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಡ್ರಿಗಸ್ ಮತ್ತು ಸರ್ಕಾರೇತರ ಸಂಘಟನೆ (ಎನ್‌ಜಿಒ) 'ಜೀನ್ ಕ್ಯಾಂಪೇನ್' ಕಡೆಯಿಂದ ಅರ್ಜಿಗಳು ಸಲ್ಲಿಕೆಯಾಗಿವೆ.