ನವದೆಹಲಿ: ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು, ಹೊಂದಿಕೊಂಡು ಹೋಗದ ಪತ್ನಿಯ ಮನೋಭಾವದಿಂದ ಮಾನಸಿಕ ಕ್ರೌರ್ಯ ಅನುಭವಿಸುತ್ತಿದ್ದ ಪತಿಗೆ ದೆಹಲಿ ಹೈಕೋರ್ಟ್ ವಿಚ್ಛೇದನ ನೀಡಿದೆ. ಈ ವೇಳೆ 'ಸತ್ತ ಕುದುರೆಗೆ ಚಡಿ ಏಟು ಬಾರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಮಾರ್ಮಿಕವಾಗಿ ನ್ಯಾಯಪೀಠ ಹೇಳಿತು.
ನವದೆಹಲಿ: ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು, ಹೊಂದಿಕೊಂಡು ಹೋಗದ ಪತ್ನಿಯ ಮನೋಭಾವದಿಂದ ಮಾನಸಿಕ ಕ್ರೌರ್ಯ ಅನುಭವಿಸುತ್ತಿದ್ದ ಪತಿಗೆ ದೆಹಲಿ ಹೈಕೋರ್ಟ್ ವಿಚ್ಛೇದನ ನೀಡಿದೆ. ಈ ವೇಳೆ 'ಸತ್ತ ಕುದುರೆಗೆ ಚಡಿ ಏಟು ಬಾರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಮಾರ್ಮಿಕವಾಗಿ ನ್ಯಾಯಪೀಠ ಹೇಳಿತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ನೇತೃತ್ವದ ನ್ಯಾಯಪೀಠವು, ವಿಚ್ಛೇದನ ನೀಡಲು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿತು. ಇದೇ ಸಂದರ್ಭದಲ್ಲಿ, ಸಂಗಾತಿಯ ನ್ಯಾಯಸಮ್ಮತವಲ್ಲದ ಮತ್ತು ನಿಂದನೀಯ ನಡವಳಿಕೆಯು ಮತ್ತೊಬ್ಬ ಸಂಗಾತಿಯ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದು ಮಾನಸಿಕ ಕ್ರೌರ್ಯವೂ ಆಗುತ್ತದೆ ಎಂದು ಹೇಳಿತು.
2001ರಲ್ಲಿ ವಿವಾಹವಾಗಿದ್ದ ದಂಪತಿ 16 ವರ್ಷ ಒಟ್ಟಿಗೆ ಇದ್ದು, ನಂತರ ಬೇರೆಯಾಗಿದ್ದರು.
ವಿಚಾರಣೆ ವೇಳೆ ಪತಿ ಪರ ವಕೀಲರು ಪತ್ನಿಯ ಕ್ರೌರ್ಯವನ್ನು ತೆರೆದಿಟ್ಟರೆ, ಪತಿ ಮತ್ತು ಅವರ ಕುಟುಂಬಸ್ಥರು ವರದಕ್ಷಿಣೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದರು.
ಬಳಿಕ ನ್ಯಾಯಾಲಯವು, 'ಇಬ್ಬರ ನಡುವಣ ಆರೋಪ-ಪ್ರತ್ಯಾರೋಪಗಳು ವೈವಾಹಿಕ ಜೀವನದ ಸಾಮಾನ್ಯ ಸಂಗತಿಗಳಂತೆ ಕಾಣುತ್ತಿಲ್ಲ. ಇದನ್ನು ಸಮಗ್ರವಾಗಿ ಪರಿಶೀಲಿಸಿದಾಗ ಇಬ್ಬರ ವೈವಾಹಿಕ ಸಂಬಂಧದ ಮುಂದುವರಿಕೆಯು ಕ್ರೌರ್ಯದ ಮುಂದುವರಿಕೆಯೇ ಸರಿ' ಎಂದು ಅಭಿಪ್ರಾಯಪಟ್ಟಿತು.
'ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಳ್ಳುವ ಪ್ರಬುದ್ಧತೆ ಇಲ್ಲದ, ಹೊಂದಾಣಿಕೆ ಮನೋಭಾವ ಇಲ್ಲದ ಪತ್ನಿಯಿಂದ ಪತಿಯು ಸಾಕಷ್ಟು ಕ್ರೌರ್ಯ ಅನುಭವಿಸಿರುವುದು ಗೊತ್ತಾಗಿದೆ. ಪತ್ನಿಯ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಯಾವುದೇ ಸಾಕ್ಷಿ ಇಲ್ಲದಿರುವುದರಿಂದ ಅದೂ ಸಹ ಪತಿಯ ಮಾನಸಿಕ ನೋವಿನ ಮೂಲವಾಗಿದೆ. ಪತಿಯ ತಂದೆ ವಿರುದ್ಧದ ಲೈಂಗಿಕ ಕಿರುಕುಳ ಆರೋಪವೂ 'ಘೋರ ಮಾನಸಿಕ ಕ್ರೌರ್ಯ' ಎಂದೇ ಕರೆಯಬಹುದಾಗಿದೆ. ಹಾಗೆಯೇ ಪತಿಯು ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪವೂ ಆಧಾರರಹಿತವಾಗಿದೆ.' ಎಂದು ಹೇಳಿತು. ಬಳಿಕ ನ್ಯಾಯಾಲಯ ಅವರಿಗೆ ವಿಚ್ಛೇದನ ನೀಡಿತು.