ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ತೆರವಾಗಿರುವ ತಾತ್ಕಾಲಿಕ ಪ್ರಾಧ್ಯಾಪಕ ಹುದ್ದೆಯ ಒಪ್ಪಂದದ ನವೀಕರಣೆ ಮತ್ತು ಪಿ.ಎಚ್.ಡಿಗೆ ಪ್ರವೇಶ ಕೊಡಿಸುವ ಹೆಸರಿನಲ್ಲಿ ಲಂಚ ಸ್ವೀಕರಿಸುವ ಸಂದರ್ಭ ವಿಜಿಲೆನ್ಸ್ ಅಧಿಕಾರಿಗಳು ಬಂಧಿಸಿರುವ ಸೋಶಿಯಲ್ ವರ್ಕ್ ವಿಭಾಗದ ಪ್ರಾಧ್ಯಾಪಕ ಪ್ರೊ. ಎ.ಕೆ ಮೋಹನನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಆರೋಪಿಯನ್ನು ತಲಶ್ಯೇರಿಯ ವಿಜಿಲೆನ್ಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾಲೇಜು ಪ್ರಭಾರ ಉಪ ಕುಲಪತಿ ಪ್ರೊ. ಕೆ.ಸಿ ಬೈಜು ಅವರು ಲಂಚ ಆರೋಪದಲ್ಲಿ ಬಂಧಿತರಾಗಿರುವ ಪ್ರೊ. ಮೋಹನನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಾಜ್ಯ ವಿಜಿಲೆನ್ಸ್ ಗುಪ್ತಚರ ವಿಭಾಗಕ್ಕೆ ಲಭಿಸಿದ ಮಾಹಿತಿಯನ್ವಯ ವಿಜಿಲೆನ್ಸ್ ಉತ್ತರ ವಲಯ ಸೂಪರಿಂಟೆಂಡೆಂಟ್ ಪ್ರಜೀತ್ ತೋಟ್ಟತ್ತಿಲ್ ನೇತೃತ್ವದ ವಿಜಿಲೆನ್ಸ್ ಅಧಿಕಾರಿಗಳ ತಂಡ ಮೊತ್ತ ಹಸ್ತಾಂತರಿಸುವ ವೇಳೆ ಕಾರ್ಯಾಚರಣೆ ನಡೆಸಿತ್ತು.