ಜೊಹಾನಸ್‌ಬರ್ಗ್: ವಿಶ್ವದ ಅತಿದೊಡ್ಡ ಸೌರ ಬ್ಯಾಟರಿ ಘಟಕ ದಕ್ಷಿಣ ಆಫ್ರಿಕಾದಲ್ಲಿ ಕಾರ್ಯಾರಂಭಿಸಿದೆ.
ದೈನಂದಿನ ವಿದ್ಯುತ್ ಬಿಕ್ಕಟ್ಟು ಎದುರಿಸುತ್ತಿರುವ ದಕ್ಷಿಣ ಆಫ್ರಿಕಾದಲ್ಲಿ ಈ ಬ್ಯಾಟರಿಯಿಂದ ಸ್ವಲ್ಪ ಮಟ್ಟಿನ ಪರಿಹಾರ ದೊರೆತಂತಾಗಿದೆ.
'ಉತ್ತರ ಕೇಪ್ ಪ್ರಾಂತ್ಯದಲ್ಲಿ ಅಳವಡಿಸಲಾಗಿರುವ ಸೌರ ಬ್ಯಾಟರಿ ತನ್ನ ಹೈಬ್ರಿಡ್ ಸೌರಶಕ್ತಿಯಿಂದ ಎಸ್ಕಾಂನ (ದಕ್ಷಿಣ ಆಫ್ರಿಕಾದ ಏಕೈಕ ವಿದ್ಯುತ್ ಸರಬರಾಜು ಸಂಸ್ಥೆ) ವಿದ್ಯುತ್ ಗ್ರಿಡ್‌ಗೆ 2023ರ ಡಿಸೆಂಬರ್‌ನ ಮಧ್ಯದಿಂದ ವಿದ್ಯುತ್ ಒದಗಿಸುತ್ತಿದೆ' ಎಂದು ದಕ್ಷಿಣ ಆಫ್ರಿಕಾದ ಸೌರಶಕ್ತಿ ಮಾರುಕಟ್ಟೆಯ ಪ್ರಮುಖ ಕಂಪನಿ ಸ್ಕೇಟೆಕ್ ಹೇಳಿದೆ.
'879 ಹೆಕ್ಟೇರ್ ಪ್ರದೇಶದಲ್ಲಿ ಮೂರು ಸೌರ ಘಟಕಗಳನ್ನು ನಿರ್ಮಿಸಲಾಗಿದ್ದು, ಇವುಗಳಿಂದ ಒಟ್ಟು 540 ಮೆಗಾವಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಈ ಪೈಕಿ 225 ಮೆಗಾವಾಟ್ ವಿದ್ಯುತ್ ಅನ್ನು ಸೌರ ಬ್ಯಾಟರಿಯು ವಿದ್ಯುತ್ ಗ್ರಿಡ್‌ಗೆ ಪೂರೈಸುತ್ತದೆ. 20 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದದಡಿಯಲ್ಲಿ ಎಸ್ಕಾಂಗೆ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ' ಎಂದು ಅದು ಹೇಳಿದೆ.
'ಹೈಬ್ರಿಡ್ ಸೌರಶಕ್ತಿ ಮತ್ತು ಬ್ಯಾಟರಿ ಸ್ಟೋರೆಜ್ ಸೌಲಭ್ಯವುಳ್ಳ ಈ ಯೋಜನೆಯು ಜಗತ್ತಿನಲ್ಲೇ ಮೊದಲು ಮತ್ತು ಅತಿ ದೊಡ್ಡದು' ಎಂದು ಕಂಪನಿ ಪ್ರತಿಪಾದಿಸಿದೆ.
ವೈಶಿಷ್ಟ್ಯಗಳೇನು?
'ಒಂದು ದಶಲಕ್ಷದಷ್ಟು ಫೋಟೊವೊಲ್ಟಾಯಿಕ್ ಘಟಕಗಳನ್ನು ಸ್ಥಾಪಿಸಲು 18 ತಿಂಗಳುಗಳ ಕಾಲ 2,600ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡಿದ್ದಾರೆ. ವಿದ್ಯುತ್ ಪೂರೈಕೆಗಾಗಿ 9,000 ಕಿಲೋ ಮೀಟರ್‌ವರೆಗೆ ಕೇಬಲ್ ಎಳೆಯಲಾಗಿದೆ. ಹಾಗೆಯೇ ಪ್ರತಿ ಬ್ಯಾಟರಿಗಳ ತೂಕವೂ 3,000 ಕೆ.ಜಿಗಳಷ್ಟಿದೆ' ಎಂದು ಸ್ಕೇಟೆಕ್ ಹೇಳಿದೆ.