ನವದೆಹಲಿ: ಸಂಸತ್ತಿನಲ್ಲಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಸರ್ಕಾರ ಅವಕಾಶ ನೀಡದ ಕಾರಣ ತಮ್ಮ ಪಕ್ಷ ಭಾರತ್ ಜೋಡೊ ನ್ಯಾಯ್ ಯಾತ್ರೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಜನವರಿ 14ರಂದು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮಣಿಪುರದಿಂದ ಆರಂಭವಾಗಲಿರುವ ಯಾತ್ರೆ 6,713 ಕಿ.ಮೀ ಕ್ರಮಿಸಲಿದೆ.
ಇಂಡಿಯಾ ಕೂಟದ ನಾಯಕರು ಮತ್ತು ಸಾಮಾನ್ಯ ನಾಗರಿಕರನ್ನು ಸಹ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಮುಂದಿನ ತಿಂಗಳು ಛತ್ತೀಸಗಢದ 7 ಜಿಲ್ಲೆಗಳಲ್ಲಿ ನ್ಯಾಯ್ ಯಾತ್ರೆ ಸಾಗಲಿದೆ. ಸಂಸತ್ತಿನಲ್ಲಿ ನಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸರ್ಕಾರ ನಮಗೆ ಅವಕಾಶ ನೀಡಲಿಲ್ಲ. ಹಾಗಾಗಿ ನಾವು ಈ ವೇದಿಕೆ(ಭಾರತ್ ಜೋಡೊ ನ್ಯಾಯ್ ಯಾತ್ರೆ) ಮೂಲಕ ಜನರ ಸಮಸ್ಯೆಗಳನ್ನು ಆಲಿಸುತ್ತೇವೆ ಎಂದು ಅವರು ಹೇಳಿದರು.
2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಆಯೋಜಿಸಲಾಗುತ್ತಿರುವ ಯಾತ್ರೆಯು ಮಣಿಪುರ ರಾಜಧಾನಿ ಇಂಫಾಲ್‌ನಿಂದ ಪ್ರಾರಂಭವಾಗಿ 66 ದಿನಗಳಲ್ಲಿ 110 ಜಿಲ್ಲೆಗಳು, 100 ಲೋಕಸಭಾ ಕ್ಷೇತ್ರಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಮಾರ್ಚ್ 30ರಂದು ಮಹಾರಾಷ್ಟ್ರದಲ್ಲಿ ಕೊನೆಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಮಣಿಪುರದಲ್ಲಿ ಅಹಿತಕರ ಘಟನೆಗಳು ನಡೆದಿವೆ. ಎಲ್ಲೆಡೆ ಮಾತನಾಡುವ ಮತ್ತು ಫೋಟೋ ಶೂಟ್ ಮಾಡಿಸುವ ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ದೂರಿದರು.
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರತಿಪಕ್ಷ ನಾಯಕರಿಗೆ ಬೆದರಿಕೆ ಹಾಕಲು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಜನವರಿ 22ರಂದು ನಡೆಯಲಿರುವ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಮಾರಂಭಕ್ಕೆ ಆಹ್ವಾನ ಬಂದಿದೆ. ಶೀಘ್ರದಲ್ಲೇ ಆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.