ಅಯೋಧ್ಯೆ: ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಎರಡು ದಿನಗಳು ಬಾಕಿಯಿದ್ದು, ಅಯೋಧ್ಯೆಯಲ್ಲಿ ಶುಕ್ರವಾರವೂ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ಸಮಾರಂಭಕ್ಕೆ ಅಂತಿಮ ಹಂತದ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಇಡೀ ನಗರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ಬಾಲರಾಮನ ವಿಗ್ರಹವನ್ನು ಗುರುವಾರ ವೇದಘೋಷಗಳ ನಡುವೆ ರಾಮ ಮಂದಿರದ ಗರ್ಭಗುಡಿಯ ಪೀಠದಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 3.30ರ ವರೆಗೆ ಧಾರ್ಮಿಕ ಆಚರಣೆಗಳು ನಡೆದವು ಎಂದು ವಿಎಚ್‌ಪಿ ವಕ್ತಾರ ವಿನೋದ್ ಬನ್ಸಲ್ ತಿಳಿಸಿದರು.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹದ ಮೊದಲ ಚಿತ್ರ ಶುಕ್ರವಾರ ಬಹಿರಂಗಗೊಂಡಿದೆ. ಈ ಚಿತ್ರವನ್ನು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಬಿಡುಗಡೆ ಮಾಡಿದೆ. ನಿಂತ ಭಂಗಿಯಲ್ಲಿರುವ ವಿಗ್ರಹವನ್ನು ಕಪ್ಪು ಶಿಲೆಯಿಂದ ಕೆತ್ತಲಾಗಿದ್ದು, 51 ಇಂಚು ಎತ್ತರ ಇದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆ ಬಿಡುಗಡೆ ಮಾಡಿದ್ದ ಚಿತ್ರದಲ್ಲಿ ವಿಗ್ರಹವನ್ನು ಬಟ್ಟೆಯಿಂದ ಸುತ್ತಲಾಗಿತ್ತು.
ಸಿದ್ಧತೆ ಪರಿಶೀಲನೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ಸಿದ್ಧತೆಯ ಪರಿಶೀಲನೆ ನಡೆಸಿದರು. ಸ್ಥಳೀಯ ಅಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಿದ ಅವರು ರಾಮ ಮಂದಿರ ಆವರಣಕ್ಕೂ ಭೇಟಿ ನೀಡಿದರು. ಅದಕ್ಕೂ ಮುನ್ನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
'ದೇಶದಾದ್ಯಂತ ಸಂತಸ ಮನೆಮಾಡಿದೆ. ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಮಗೆಲ್ಲರಿಗೂ ಐತಿಹಾಸಿಕ ಕ್ಷಣವಾಗಿದೆ. ಅಯೋಧ್ಯೆಯ ಜನರು ಮಾತ್ರವಲ್ಲದೆ ಇಡೀ ದೇಶದ ಜನರು ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ' ಎಂದು ಆದಿತ್ಯನಾಥ ಅವರು ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ಸಂಜೆಯಿಂದ ಸೋಮವಾರದವರೆಗೆ ರಾಮಮಂದಿರಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಾಣ ಪ್ರತಿಷ್ಠಾಪನೆಯ ಮರುದಿನ ಅಂದರೆ ಜ.23 ರಿಂದ ಭಕ್ತರು ಮತ್ತು ಸಾರ್ವಜನಿಕರ ಭೇಟಿಗೆ ದೇವಾಲಯ ಮುಕ್ತವಾಗಲಿದೆ.
ಮೋದಿ ಕಠಿಣ ವ್ರತಾಚರಣೆ (ನವದೆಹಲಿ ವರದಿ): ಪ್ರಾಣ ಪ್ರತಿಷ್ಠಾಪನಾ ಸಮಾರಂಭದ 'ಮುಖ್ಯ ಯಜಮಾನ' ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಧಾರ್ಮಿಕ ವಿಧಿಗಳ ಅಂಗವಾಗಿ ಕಟ್ಟುನಿಟ್ಟಿನ ವ್ರತಾಚರಣೆ ಕೈಗೊಂಡಿದ್ದಾರೆ.
ಹೊದಿಕೆ ಹಾಸಿ ನೆಲದಲ್ಲೇ ಮಲಗುವ ಅವರು ಎಳನೀರು ಮಾತ್ರ ಸೇವಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಹಾರದಲ್ಲಿ ಕಟ್ಟುನಿಟ್ಟು ಪಾಲಿಸುವುದರ ಜತೆಯಲ್ಲೇ ಇತರ ಪೂಜೆ ಹಾಗೂ ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದಾರೆ. 'ಗೋಪೂಜೆ' ಮತ್ತು 'ಅನ್ನದಾನ' ಒಳಗೊಂಡಂತೆ ವಿವಿಧ ರೀತಿಯ ದಾನಗಳನ್ನು ಕೈಗೊಂಡಿದ್ದಾರೆ.
ಮೋದಿ ಅವರು ಕಳೆದ ಕೆಲ ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿರುವ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ನಾಸಿಕ್‌ನ ಕಾಳಾರಾಮ್ ದೇವಸ್ಥಾನ, ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಾಲಯ, ಕೇರಳದ ಗುರುವಾಯೂರು ಮತ್ತು ತ್ರಿಪ್ರಯಾರ್ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ಎರಡು ದಿನ ಅವರು ತಮಿಳುನಾಡಿನ ದೇವಾಲಯಗಳಿಗೆ ಭೇಟಿ ನೀಡಲಿದ್ದು, ಆ ಬಳಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಅಯೋಧ್ಯೆಗೆ ಪ್ರಯಾಣಿಸಲಿದ್ದಾರೆ.
ಜೈಲುಗಳಲ್ಲಿ ನೇರ ಪ್ರಸಾರ: ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ನೇರ ಪ್ರಸಾರಕ್ಕಾಗಿ ಉತ್ತರ ಪ್ರದೇಶದ ಜೈಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೈಲುಗಳಲ್ಲಿ ಕೈದಿಗಳಿಗೆ 'ಭಜನೆ' ಮತ್ತು 'ಕೀರ್ತನೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 'ಜೈಲುಗಳಲ್ಲಿ ನೇರ ಪ್ರಸಾರಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ' ಎಂದು ಉತ್ತರ ಪ್ರದೇಶದ ಸಚಿವ ಧರ್ಮವೀರ್ ಪ್ರಜಾಪತಿ ತಿಳಿಸಿದ್ದಾರೆ.