ನವದೆಹಲಿ: ತಮ್ಮನ್ನು ಪೊಲೀಸ್ ವಶ ಇಟ್ಟುಕೊಂಡಿದ್ದು ಕಾನೂನು ಬಾಹಿರ. ಹೀಗಾಗಿ ಬಿಡುಗಡೆಗೊಳಿಸಬೇಕು ಎಂದು ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ನೀಲಂ ನೀಲಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರಿದ್ದ ಪೀಠವು, ಇದು ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿತು.
ಈಗಾಗಲೇ ಅರ್ಜಿದಾರರು ಕೆಳ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಮನವಿ ಮಾಡಿದ್ದಾರೆ. ಹೀಗಾಗಿ ಈ ಅರ್ಜಿಯು ವಿಚಾರಣೆಗೆ ಅರ್ಹವಲ್ಲ. ಅದ್ದರಿಂದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪೀಠದಲ್ಲಿದ್ದ ನ್ಯಾಯಮೂರ್ತಿ ಮನೋಜ್ ಜೈನ್ ಹೇಳಿದರು.
ಪೊಲೀಸ್ ಕಸ್ಟಡಿಯು ಸಂವಿಧಾನದ ನಿಬಂಧನೆಯ ಉಲ್ಲಂಘನೆಯಾಗಿದೆ. ವಿಚಾರಣೆಯ ಸಮಯದಲ್ಲಿ ಅವರ ಪರ ವಾದ ಮಂಡಿಸಲು ಹಾಗೂ ಅವರ (ನೀಲಂ) ಇಚ್ಛೆಯ ವಕೀಲರನ್ನು ಸಂಪರ್ಕಿಸಲು ಆಕೆಗೆ ಅವಕಾಶವಿಲ್ಲ ಎಂದು ನೀಲಂ ಪರ ವಕೀಲರು ವಾದ ಮಂಡಿಸಿದ್ದರು.
ಈ ವಾದವನ್ನು ನಿರಾಕರಿಸಿದ ನ್ಯಾಯಪೀಠವು, ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ಹೇಳಿತು.
ಸಂಸತ್ತಿನ ಭದ್ರತೆ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾದ ನೀಲಂ ಸೇರಿದಂತೆ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ವಿಚಾರಣಾ ನ್ಯಾಯಾಲಯವು ಡಿಸೆಂಬರ್ 21 ರಂದು ಜನವರಿ 5 ರವರೆಗೆ ವಿಸ್ತರಿಸಿತ್ತು.