ರಾಂಚಿ: ಕಿರಿಯ ಮಗನಿಂದ ಜೀವನ ನಿರ್ವಹಣಾ ವೆಚ್ಚ ಕೊಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಜಾರ್ಖಂಡ್ ಹೈಕೋರ್ಟ್, 'ಆಕಾಶಕ್ಕಿಂತಲೂ ತಂದೆಯೇ ಎತ್ತರ' ಎಂಬ ಮಹಾಭಾರತದಲ್ಲಿನ ಮಾತನ್ನು ಉಲ್ಲೇಖಿಸಿ ಆದೇಶಿಸಿದ್ದಾರೆ.
ರಾಂಚಿ: ಕಿರಿಯ ಮಗನಿಂದ ಜೀವನ ನಿರ್ವಹಣಾ ವೆಚ್ಚ ಕೊಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಜಾರ್ಖಂಡ್ ಹೈಕೋರ್ಟ್, 'ಆಕಾಶಕ್ಕಿಂತಲೂ ತಂದೆಯೇ ಎತ್ತರ' ಎಂಬ ಮಹಾಭಾರತದಲ್ಲಿನ ಮಾತನ್ನು ಉಲ್ಲೇಖಿಸಿ ಆದೇಶಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಭಾಷ್ ಚಾಂದ್, 'ತನ್ನ ತಂದೆ-ತಾಯಿಯ ಯೋಗಕ್ಷೇಮ ನೋಡಿಕೊಳ್ಳುವುದು ಮಗನ ಕರ್ತವ್ಯ' ಎಂದು ತಿಳಿಹೇಳಿದ್ದಾರೆ.
ಯಕ್ಷನ ಪ್ರಶ್ನೆಗಳಿಗೆ ಯುಧಿಷ್ಠಿರ ನೀಡಿದ ಉತ್ತರಗಳನ್ನು ನ್ಯಾಯಮೂರ್ತಿ ಚಾಂದ್ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
'ಭೂಮಿಗಿಂತ ಭಾರ ಯಾವುದು? ಆಕಾಶಕ್ಕಿಂತಲೂ ಎತ್ತರವಾದುದು ಯಾವುದು ಎಂದು ಯುಧಿಷ್ಠಿರನನ್ನು ಯಕ್ಷ ಕೇಳುತ್ತಾನೆ. ಆಗ ಯುಧಿಷ್ಠಿರ, ತಾಯಿಯು ಭೂಮಿಗಿಂತ ಭಾರ ಹಾಗೂ ತಂದೆಯು ಆಕಾಶಕ್ಕಿಂತಲೂ ಎತ್ತರ ಎಂದು ಉತ್ತರಿಸುತ್ತಾನೆ' ಎಂಬ ಮಹಾಭಾರತದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ.
60 ವರ್ಷದ ದೇವಕಿ ಸಾವೊ ಎಂಬುವವರು, ತಮ್ಮ ಕಿರಿಯ ಮಗ ಮನೋಜ್ ಸಾವೊನಿಂದ ಜೀವನ ನಿರ್ವಹಣಾ ವೆಚ್ಚ ಕೊಡಿಸುವಂತೆ ಕೊಡರ್ಮಾದಲ್ಲಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತಂದೆಯ ಜೀವನ ನಿರ್ವಹಣಾ ವೆಚ್ಚವಾಗಿ ಅಣ್ಣನಿಗೆ ಪ್ರತಿ ತಿಂಗಳು ₹ 3 ಸಾವಿರ ನೀಡುವಂತೆ ಕೌಟುಂಬಿಕ ನ್ಯಾಯಾಲಯವು ಮನೋಜ್ ಅವರಿಗೆ ನಿರ್ದೇಶನ ನೀಡಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮನೋಜ್, ಹೈಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
'ತಂದೆಯವರು ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದು, ಹಲವು ಆದಾಯ ಮೂಲಗಳನ್ನು ಹೊಂದಿದ್ದಾರೆ. ಅವರಿಗೆ ಧನದಾಹವೂ ಹೆಚ್ಚು' ಎಂದು ಮನೋಜ್ ಅರ್ಜಿಯಲ್ಲಿ ತಿಳಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಚಾಂದ್, 'ತಂದೆಗೆ ಬೇರೆ ಮೂಲಗಳಿಂದ ಆದಾಯ ಇದೆ ಎಂಬ ವಾದವನ್ನು ಒಪ್ಪಿದರೂ, ಇಳಿಗಾಲದಲ್ಲಿ ಅವರ ಜೀವನೋಪಾಯಕ್ಕಾಗಿ ಹಣಕಾಸು ನೆರವು ನೀಡುವುದು ಮಗನ ಕರ್ತವ್ಯ' ಎಂದು ಹೇಳಿದರು.
ಮನೋಜ್ ಅವರ ಅರ್ಜಿಯನ್ನು ವಜಾಗೊಳಿಸಿದ ಅವರು, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಆದೇಶ ಹೊರಡಿಸಿದ್ದಾರೆ.