ನವದೆಹಲಿ: ಭಾರತದಲ್ಲಿ ಹತ್ಯೆಗಳನ್ನು ನಡೆಸಲು ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿರುವ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಭಯೋತ್ಪಾದಕ ಎಂದು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯಿದೆ(UAPA)ಅಡಿಯಲ್ಲಿ ಸತ್ವಿಂದರ್ ಸಿಂಗ್ ಅಲಿಯಾಸ್ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.
ಗೋಲ್ಡಿ ಬ್ರಾರ್ ಪ್ರಸ್ತುತ ಕೆನಡಾದ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದು, ಖಲಿಸ್ತಾನ್ ಪರ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಕೇಂದ್ರ ಹೇಳಿದೆ.
ಕಾಂಗ್ರೆಸ್ ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆಯ ಹೊಣೆ ವಹಿಸಿಕೊಂಡಿದ್ದ ಬ್ರಾರ್, ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಉನ್ನತ ದರ್ಜೆಯ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದು ಹಿಂಸಾತ್ಮಕ ಚಟುವಟಿಕೆಗಳಿಗೆ ಅವುಗಳನ್ನು ಪೂರೈಸುತ್ತಿದ್ದಾನೆ ಎಂದು ಕೇಂದ್ರ ಹೇಳಿದೆ.