HEALTH TIPS

ಪಿ.ಜಿ ವೈದ್ಯಕೀಯ ಪ್ರವೇಶಕ್ಕೆ ಆನ್‌ಲೈನ್‌ ಕೌನ್ಸೆಲಿಂಗ್‌ ಕಡ್ಡಾಯ: ಎನ್‌ಎಂಸಿ

              ವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ ಪ್ರವೇಶವು ಈಗ ಆನ್‌ಲೈನ್‌ ಕೌನ್ಸೆಲಿಂಗ್‌ ಮೂಲಕ ಮಾತ್ರವೇ ನಡೆಯಬೇಕು. ಯಾವುದೇ ಕಾಲೇಜುಗಳು ನೇರವಾಗಿ ದಾಖಲಾತಿ ಮಾಡಿಕೊಳ್ಳುವಂತಿಲ್ಲ. ಅಲ್ಲದೆ, ಪ್ರತಿ ಕೋರ್ಸ್‌ನ ಶುಲ್ಕವನ್ನು ಮುಂಚಿತವಾಗಿಯೇ ‍ಪ್ರಕಟಿಸಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೇಳಿದೆ.

               ವೈದ್ಯಕೀಯ ಶಿಕ್ಷಣ ನಿಯಂತ್ರಕ ಸಂಸ್ಥೆಯಾದ ಎನ್‌ಎಂಸಿಯು ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿನ 'ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಾವಳಿಗಳು-2023' ಪ್ರಕಾರ, ಆಯಾ ಪರೀಕ್ಷೆಗಳ ಮೆರಿಟ್ ಪಟ್ಟಿಯ ಆಧಾರದ ಮೇಲೆ, ಎಲ್ಲ ಪಿಜಿ ಸೀಟುಗಳಿಗೆ ಎಲ್ಲ ಸುತ್ತಿನ ಸಾಮಾನ್ಯ ಕೌನ್ಸೆಲಿಂಗ್‌ ಅನ್ನು ಆನ್‌ಲೈನ್‌ ವಿಧಾನದಲ್ಲಿ ರಾಜ್ಯ ಅಥವಾ ಕೇಂದ್ರೀಯ ಕೌನ್ಸೆಲಿಂಗ್‌ ಪ್ರಾಧಿಕಾರಗಳು ನಡೆಸಲಿವೆ.

               'ಎಲ್ಲಾ ಸೀಟುಗಳಿಗೆ ಎಲ್ಲಾ ಸುತ್ತಿನ ಕೌನ್ಸೆಲಿಂಗ್ ಅನ್ನು ರಾಜ್ಯ ಅಥವಾ ಕೇಂದ್ರ ಕೌನ್ಸೆಲಿಂಗ್ ಪ್ರಾಧಿಕಾರವು ಆನ್‌ಲೈನ್ ವಿಧಾನದಲ್ಲಿ ನಡೆಸುತ್ತದೆ. ಯಾವುದೇ ವೈದ್ಯಕೀಯ ಕಾಲೇಜು ಅಥವಾ ಸಂಸ್ಥೆಯು ಯಾವುದೇ ಅಭ್ಯರ್ಥಿಗೆ ನೇರ ಪ್ರವೇಶ ನೀಡಲು ಅವಕಾಶವಿರುವುದಿಲ್ಲ'.

'ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ವಿವರಗಳನ್ನು ನಮೂದಿಸುವಾಗ, ವೈದ್ಯಕೀಯ ಕಾಲೇಜುಗಳು ಪ್ರತಿ ಕೋರ್ಸ್‌ಗೆ ಶುಲ್ಕದ ಮೊತ್ತವನ್ನು ನಮೂದಿಸಬೇಕು, ತಪ್ಪಿದರೆ ಸೀಟ್ ಅನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗದು' ಎಂದು ಈ ನಿಯಮಾವಳಿಗಳಲ್ಲಿ ಹೇಳಲಾಗಿದೆ.

              ವೈದ್ಯಕೀಯ ಶಿಕ್ಷಣ ಸಂಸ್ಥೆ ಅಥವಾ ಕಾಲೇಜುಗಳು, ಈ ಹೊಸ ನಿಯಮಾವಳಿಗಳ ಅನುಷ್ಠಾನದಲ್ಲಿ ವಿಫಲವಾದಲ್ಲಿ ವಿತ್ತೀಯ ದಂಡ, ಸೀಟುಗಳ ಸಂಖ್ಯೆಯಲ್ಲಿ ಕಡಿತ (ಪ್ರವೇಶ ಸಾಮರ್ಥ್ಯ) ಅಥವಾ ಪ್ರವೇಶಗಳ ಸಂಪೂರ್ಣ ಸ್ಥಗಿತಗೊಳಿಸುವುದು ಎಂಬುದನ್ನು ಸಹ ನಿಯಮಾವಳಿಗಳಲ್ಲಿ ಹೇಳಲಾಗಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ

               'ಪರೀಕ್ಷೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ಮತ್ತು ವಸ್ತುನಿಷ್ಠತೆ ತರಲು, ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ರಚನಾತ್ಮಕ ಮೌಲ್ಯಮಾಪನ ಮತ್ತು ಬಹು ಆಯ್ಕೆಯ ಪ್ರಶ್ನೆಗಳ ಆಯ್ಕೆಯನ್ನು ಒಳಗೊಂಡಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ' ಎಂದು ಎನ್‌ಎಂಸಿಯ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ. ವಿಜಯ್‌ ಓಜಾ ತಿಳಿಸಿದ್ದಾರೆ.

                 ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲು ಮತ್ತು ಅದರ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಜಿಲ್ಲಾ ರೆಸಿಡೆನ್ಸಿ ಪ್ರೋಗ್ರಾಂನಲ್ಲಿ (ಡಿಆರ್‌ಪಿ) ಮತ್ತೊಂದು ಬದಲಾವಣೆ ಮಾಡಲಾಗಿದೆ. ಈ ಹಿಂದೆ ಜಿಲ್ಲಾ ಆಸ್ಪತ್ರೆ ಎಂದರೆ 100 ಹಾಸಿಗೆಗಳ ಆಸ್ಪತ್ರೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಹೊಸ ನಿಯಮಗಳಲ್ಲಿ ಅದನ್ನು 50 ಹಾಸಿಗೆಗಳಿಗೆ ಇಳಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

              ವೈದ್ಯಕೀಯ ಕಾಲೇಜಿಗೆ ಪಿಜಿ ಕೋರ್ಸ್‌ಗಳು ಅಥವಾ ಸೀಟುಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ ನಂತರ, ವಿದ್ಯಾರ್ಥಿಗಳಿಗೆ ಅರ್ಹತೆಯ ನೋಂದಣಿ ಉದ್ದೇಶಕ್ಕಾಗಿಯೇ ಈ ಕೋರ್ಸ್ ಅನ್ನು ಗುರುತಿಸಿರುವುದಾಗಿ ಪರಿಗಣಿಸಲಾಗುತ್ತದೆ. ಇದು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ನಂತರ ತಮ್ಮ ಪದವಿಯನ್ನು ನೋಂದಾಯಿಸಲು ವಿದ್ಯಾರ್ಥಿಗಳು ಎದುರಿಸುತ್ತಿರುವ ಅನೇಕ ತೊಂದರೆಗಳನ್ನು ಪರಿಹರಿಸಲಿದೆ ಎಂದು ಓಜಾ ಹೇಳಿದರು.

              ಅಸ್ತಿತ್ವದಲ್ಲಿರುವ ಅಥವಾ ಪ್ರಸ್ತಾವಿತ ಬೋಧಕೇತರ ಆಸ್ಪತ್ರೆಗಳು ಸರ್ಕಾರಿ ಸ್ವಾಮ್ಯದ ಮತ್ತು ಆಡಳಿತ ಮಂಡಳಿಯ ಪದವಿಪೂರ್ವ ಕಾಲೇಜುಗಳನ್ನು ಹೊಂದಿರದೆ ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸಬಹುದು. ಇದು ಸಣ್ಣ ಸರ್ಕಾರಿ ಆಸ್ಪತ್ರೆಗಳು/ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಡಾ. ಓಜಾ ಹೇಳಿದರು.

ಹೊಸ ನಿಯಮಾವಳಿಗಳಲ್ಲಿ ಏನಿದೆ?

*ಡಿಆರ್‌ಪಿ ಅಡಿಯಲ್ಲಿ, 50 ಹಾಸಿಗೆಗಳಿಗಿಂತ ಕಡಿಮೆಯಿಲ್ಲದ ಸಾರ್ವಜನಿಕ ಆಸ್ಪತ್ರೆ ಅಥವಾ ಸರ್ಕಾರಿ ಅನುದಾನದಿಂದ ಕಾರ್ಯನಿರ್ವಹಿಸುವ ಆಸ್ಪತ್ರೆಯು ವೈದ್ಯರಿಗೆ ತರಬೇತಿ ನೀಡಬಹುದು

*ತಳಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ಬಲಪಡಿಸಲು ಜಿಲ್ಲಾ ಆರೋಗ್ಯ ವ್ಯವಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಡಿಆರ್‌ಪಿ ಗುರಿಯಾಗಿದೆ

* ವೈದ್ಯಕೀಯ ಕಾಲೇಜುಗಳು ಈಗ ಮೂರನೇ ವರ್ಷದಿಂದ ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸಬಹುದು

* ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆಯು ಅಗತ್ಯ ಮೂಲಸೌಕರ್ಯ ಮತ್ತು ಬೋಧಕ ಸಿಬ್ಬಂದಿ ಹಾಗೂ ಕ್ಲಿನಿಕಲ್ ಸಾಮಗ್ರಿಗಳು ಇತ್ಯಾದಿಗಳನ್ನು ಹೊಂದಿರಲೇಬೇಕು

* ಎಲ್ಲಾ ವಿದ್ಯಾರ್ಥಿಗಳು ಸಂಶೋಧನಾ ವಿಧಾನ, ಹೃದ್ರೋಗಿಗಳಿಗೆ ಜೀವರಕ್ಷಕ ನೆರವು ನೀಡುವ ಕೌಶಲ ಮತ್ತು ನೈತಿಕ ಶಿಕ್ಷಣ ಕೋರ್ಸ್‌ಗಳಲ್ಲಿ ತರಬೇತಿ ಹೊಂದುವುದು ಕಡ್ಡಾಯವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries