ಪತ್ತನಂತಿಟ್ಟ: ಮಕರ ಬೆಳಕು ಉತ್ಸವಕ್ಕೂ ಮುನ್ನ ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜನವರಿ 10 ರಿಂದ ಸ್ಪಾಟ್ ಬುಕಿಂಗ್ ನಿಲ್ಲಿಸಲಾಗುವುದು.
ಭಕ್ತರು ವರ್ಚುವಲ್ ಕ್ಯೂ ಮೂಲಕ ದರ್ಶನ ಪಡೆಯಬಹುದು. ಜನವರಿ 14 ರಂದು, ವರ್ಚುವಲ್ ಕ್ಯೂ ಬುಕಿಂಗ್ ಮಿತಿಯನ್ನು 50,000 ಗೆ ಸೀಮಿತಗೊಳಿಸಲಾಗಿದೆ. ಮರುದಿನ 15ರಂದು 40 ಸಾವಿರ ಜನರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
14 ಮತ್ತು 15ರಂದು ಶಬರಿಮಲೆಗೆ ಅಪಾರ ಭಕ್ತ ಸಮೂಹಕ್ಕೆ ಸಾಕ್ಷಿಯಾಗಲಿದೆ. ಈ ಪರಿಸ್ಥಿತಿಯನ್ನು ಪರಿಗಣಿಸಿ ಮಹಿಳೆಯರು ಮತ್ತು ಮಕ್ಕಳು ಯಾತ್ರೆಯನ್ನು ತಪ್ಪಿಸಬೇಕು ಎಂದು ದೇವಸ್ವಂ ಮಂಡಳಿ ತಿಳಿಸಿದೆ. 16ರಿಂದ 20ರವರೆಗೆ ಹೆಚ್ಚಿನ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿದರು.
ಮಕರ ಬೆಳಕಿಗೆ ಮೂರು ದಿನಗಳ ಮೊದಲು ಅಯ್ಯಪ್ಪ ಭಕ್ತರು ಸಾಮಾನ್ಯವಾಗಿ ಮಕರ ಬೆಳಕು ಮತ್ತು ತಿರುವಾಭರಣ ದರ್ಶನಕ್ಕಾಗಿ ಸನ್ನಿಧಿಯಿಂದ ಹೊರಡದೆ ಶಬರಿಮಲೆಯ ವಿವಿಧ ಸ್ಥಳಗಳಲ್ಲಿ ಬಿಡಾರ ಹೂಡುತ್ತಾರೆ. ಹೀಗಿರುವಾಗ ಹೆಚ್ಚು ಜನ ಬೆಟ್ಟ ಹತ್ತಿದರೆ ಮಕರ ಬೆಳಕು ದರ್ಶನ ವೀಕ್ಷಣೆಗೆ ಅಡ್ಡಿಯಾಗುತ್ತದೆ. ಮತ್ತು ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಗಣನೆಗೆ ತೆಗೆದುಕೊಂಡ ಅಧ್ಯಕ್ಷರು, 10ರಿಂದ ಸ್ಪಾಟ್ ಬುಕ್ಕಿಂಗ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲು ಸೂಚಿಸಿದ್ದಾರೆ.