ಮುಂಬೈ/ಭೋಪಾಲ್/ರಾಯಪುರ: 'ಅಪಘಾತ ನಡೆಸಿ ಪರಾರಿ'ಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಯಾಗಲಿರುವ ಹೊಸ ಕಾನೂನು ವಿರೋಧಿಸಿ ಮಹಾರಾಷ್ಟ್ರ, ಮಧ್ಯ ಪ್ರದೇಶ, ಛತ್ತೀಸಗಡ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಾಣಿಜ್ಯ ವಾಹನ, ಟ್ರಕ್, ಟ್ಯಾಂಕರ್‌ಗಳ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ಮುಂಬೈ, ನಾಸಿಕ್, ಭೋಪಾಲ್, ರಾಯಪುರ ಸೇರಿದಂತೆ ಹಲವು ನಗರಗಳಲ್ಲಿ ರಸ್ತೆ ಬಂದ್ ನಡೆಸಿದರು.
ಮುಂಬೈನಲ್ಲಿ ಮುಂಬೈ- ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ಚಾಲಕರನ್ನು ಚದುರಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಚಾಲಕರು ಹಲ್ಲೆ ನಡೆಸಿದ್ದಾರೆ. ಕೆಲ ಚಾಲಕರು ಕಲ್ಲು ಮತ್ತು ಬೆತ್ತಗಳೊಂದಿಗೆ ದಾಳಿ ನಡೆಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಗುರುತಿಸಲಾಗಿದ್ದು, ಒಟ್ಟು 40 ಚಾಲಕರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಛತ್ತೀಸಗಡದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಚಾಲಕರು ಪ್ರತಿಭಟನೆ ನಡೆಸಿದರು. ಸುಮಾರು 12 ಸಾವಿರ ಖಾಸಗಿ ಬಸ್‌ಗಳ ಚಾಲಕರು ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆ 1 ಲಕ್ಷ ಚಾಲಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಛತ್ತೀಸಗಡ ರಾಜ್ಯ ವಾಹನ ಚಾಲಕರ ಸಂಘದ ಸಂಚಾಲಕ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
ಭೋಪಾಲದ ಲಾಲ್‌ಘಾಟಿಯಲ್ಲಿ ಪ್ರತಿಭಟಿಸುತ್ತಿದ್ದ ಚಾಲಕರು ನಗರ ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರು.
'ಅಪಘಾತ ನಡೆಸಿ ಪರಾರಿ'ಗೆ ಸಂಬಂಧಿಸಿದ ಹೊಸ ಕಾನೂನಿನಲ್ಲಿ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹ 7 ಲಕ್ಷ ದಂಡ ವಿಧಿಸುವ ಪ್ರಸ್ತಾಪವಿದೆ.