ಬದಿಯಡ್ಕ: ಕುಂಬಳೆ ಬಿ.ಆರ್.ಸಿ. ಮಟ್ಟದ ಪ್ರತಿಭೋತ್ಸವ- ವಿಜಯೋತ್ಸವ ಕೊರಗ ಕಾಲೋನಿ, ಸ್ಥಳೀಯ ಪ್ರತಿಭಾ ಕೇಂದ್ರದ ಮಾತೃ ಶಾಲೆ ಸಹಕಾರದೊಂದಿಗೆ ಶನಿವಾರ ಎನ್.ಎಚ್.ಎಸ್.ಎಸ್ ಪೆರಡಾಲ ಶಾಲೆಯಲ್ಲಿ ನಡೆಯಿತು.
ಖ್ಯಾತ ಸಾಹಿತಿ ಮತ್ತು ಗಾಯಕ ಎಸ್.ರತ್ನಾಕರ ಓಡಂಗಲ್ಲು ಉದ್ಘಾಟಿಸಿದರು. ಕುಂಬಳೆ ಬ್ಲಾಕ್ ಕಾರ್ಯಕ್ರಮ ಸಂಯೋಜಕ ಜೆ.ಜಯರಾಮ್ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭೋತ್ಸವ-ವಿಜಯೋತ್ಸವವು ಕೇರಳದ ಕಾಸರಗೋಡು ಪ್ರಾದೇಶಿಕ ಪ್ರತಿಭಾ ಕೇಂದ್ರಗಳಲ್ಲಿ ಅನುಷ್ಠಾನಗೊಂಡ ಕಾರ್ಯಕ್ರಮವಾಗಿದ್ದು, ಹಿಂದುಳಿದ ಮಕ್ಕಳು ಮತ್ತು ಅವರ ಪೋಷಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು, ಅವರ ಕೌಶಲ್ಯವನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸಲು ಮತ್ತು ಆತ್ಮಸ್ಥೈರ್ಯವನ್ನು ಮೂಡಿಸಲು ತನ್ಮೂಲಕ ಶೈಕ್ಷಣಿಕ ಬೆಂಬಲ ಗುರುತಿಸಲು ರೂಪು ನೀಡಿದ ಕಾರ್ಯಕ್ರಮವಾಗಿದೆ. ಕಲೆ-ಕ್ರೀಡಾ ಶ್ರೇಷ್ಠತೆ ಮುಖ್ಯ ಲಕ್ಷ್ಯವಾಗಿದೆ.
ಕುಂಬಳೆ ಬ್ಲಾಕ್ ಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ 8 ಪ್ರಾದೇಶಿಕ ಪ್ರತಿಭಾ ಕೇಂದ್ರಗಳಿಂದ ಆಯ್ಕೆಯಾದ ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.
ಪೆರಡಾಲ ಎನ್ ಎಚ್ ಎಸ್ ಎಸ್ ಶಾಲಾ ಶಿಕ್ಷಕರಾದ ರಾಜೇಶ್ ಅಗಲ್ಪಾಡಿ, ನಿರಂಜನ ರೈ ಮಾತನಾಡಿದರು. ಸಿಆರ್‍ಸಿಸಿ ಬಿಜೀಶ್ ಕೆ ನಾಯರ್ ಸ್ವಾಗತಿಸಿ, ಭಾರತಿ ವಂದಿಸಿದರು. ಕುಂಬಳೆ ಬಿಆರ್ ಸಿ ಸಿ ತರಬೇತುದಾರರು ಹಾಗೂ ಪೋಷಕರು ಪಾಲ್ಗೊಂಡಿದ್ದರು.