ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್‌ಲೈನ್ಸ್ ಪೈಲಟ್ ಮೇಲೆ ಸಾಹಿಲ್ ಕಟಾರಿಯಾ ಎಂಬಾತ ಹಲ್ಲೆ ನಡೆಸಿದ್ದು ಈ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹವಾಮಾನ ವೈಪರೀತ್ಯದಿಂದ ವಿಮಾನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಪ್ರಯಾಣಿಕರು ದಯವಿಟ್ಟು ತಾಳ್ಮೆಯಿಂದ ಇರಬೇಕು. ಪ್ರಯಾಣ ಸುಗಮವಾಗಿ ನಡೆಸಲು ಸಂಬಂಧಪಟ್ಟ ಇಲಾಖೆಗಳು ನಿರಂತರ ಪ್ರಯತ್ನ ನಡೆಸುತ್ತಿವೆ. ಏತನ್ಮಧ್ಯೆ, ಅಶಿಸ್ತಿನ ನಡವಳಿಕೆಯ ಘಟನೆಗಳು ಸ್ವೀಕಾರಾರ್ಹವಲ್ಲ ಮತ್ತು ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲಿ ನಡೆದಿದ್ದೇನು?
ವಾಸ್ತವವಾಗಿ, ಇಂಡಿಗೋ ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುತ್ತಿತ್ತು. ಅದೇ ಸಮಯಕ್ಕೆ ಸಹ ಪೈಲಟ್ ಅನೂಪ್ ಕುಮಾರ್ ವಿಮಾನ ಟೇಕ್ ಆಫ್ ಆಗಲು ವಿಳಂಬವಾಗುತ್ತಿದೆ ಎಂದು ಘೋಷಿಸುತ್ತಿದ್ದರು. ಆಗ ಸಾಹಿಲ್ ಕಟಾರಿಯಾ ಎಂಬ ವ್ಯಕ್ತಿ ಆಸನದಿಂದ ಎದ್ದು ಆತನ ಬಳಿ ತೆರಳಿ ಗುದ್ದಿದ್ದಾನೆ. ಈ ಘಟನೆಯನ್ನು ಸಹ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಇದಾದ ಬಳಿಕ ಘಟನೆಯ ವಿಡಿಯೋ ಭಾನುವಾರ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕ್ಷಮೆ ಕೇಳಿದ ಆರೋಪಿ ಸಾಹಿಲ್
ಈ ಬಗ್ಗೆ ದೂರು ಸ್ವೀಕರಿಸಲಾಗಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಇಂಡಿಗೋ ವಿಮಾನದ ಸಹ-ಪೈಲಟ್ ಮತ್ತು ಇತರ ಸಿಬ್ಬಂದಿ ಸಾಹಿಲ್ ಕಟಾರಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ಆರೋಪಿ ಸಹ ಪೈಲಟ್‌ಗೆ ಈ ವಿಷಯದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಹೊರಬಿದ್ದಿದ್ದು, ಅಧಿಕಾರಿಗಳು ಸಾಹಿಲ್‌ನನ್ನು ವಿಮಾನದ ಹೊರಗೆ ಕರೆದೊಯ್ಯುತ್ತಿರುವಾಗ, ಪೈಲಟ್ ಅನುಪ್ ಕುಮಾರ್ ವಿಮಾನದ ಹೊರಗೆ ನಿಂತಿರುವುದನ್ನು ನೋಡಿ ಆ ಕಡೆ ಹೋಗಲು ಪ್ರಯತ್ನಿಸುತ್ತಾನೆ. ಅದು ಸಾಧ್ಯವಾಗದಿದ್ದಾಗ ತನ್ನ ಎರಡೂ ಕೈಗಳನ್ನು ಜೋಡಿಸಿ ಪೈಲಟ್‌ಗೆ ಸರ್, ನನ್ನನ್ನು ಕ್ಷಮಿಸಿ ಎಂದು ಕೇಳಿದ್ದಾನೆ.