ಅಯೋಧ್ಯೆ: ಜನವರಿ 22ರಂದು ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಭಾಗವಾಗಿ ಇಂದು ( ಮಂಗಳವಾರ) ಪೂರ್ವಭಾವಿ ಧಾರ್ಮಿಕ ಆಚರಣೆಗಳು ರಾಮಮಂದಿರದ ಅವರಣದಲ್ಲಿ ಪ್ರಾರಂಭಿಸಲಾಗಿದೆ ಎಂದು ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ .

ಪುರೋಹಿತರಿಂದ ವಿಶೇಷ ಹೋಮ ಹವನಗಳನ್ನು ಮಾಡಲಾಗುವುದು. 121 ಆಚಾರ್ಯರು ಈ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಅನುಷ್ಠಾನದ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆ ನಿರ್ವಹಿಸಲಿದ್ದಾರೆ. ಕಾಶಿಯ ಪ್ರಧಾನ ಅರ್ಚಕ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಮಾರ್ಗದರ್ಶನ ನೀಡಲಿದ್ದಾರೆ ಎಂದು ದಾಸ್ ಹೇಳಿದ್ದಾರೆ.
ಜನವರಿ 17ರಂದು ರಾಮ ಮೂರ್ತಿ ರಾಮಮಂದಿರದ ಒಳಗೆ ತೆಗೆದುಕೊಂಡು ಹೋಗಲಾಗುವುದು. ಬಳಿಕ ಜನವರಿ 18ರಂದು 'ತೀರ್ಥ ಪೂಜೆ', 'ಜಲ ಯಾತ್ರೆ' ಮುಂತಾದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದಾಸ್ ಹೇಳಿದ್ದಾರೆ.
ಈ ಧಾರ್ಮಿಕ ಆಚರಣೆಗಳು ಜನವರಿ 22ರ ಹಿಂದಿನ ದಿನದವರೆಗೂ ನಡೆಯಲಿವೆ. ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಅಂಗವಾಗಿ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಮಾಡಲಾಗುವುದು ಎಂದು ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ 'ಪ್ರಾಣ ಪ್ರತಿಷ್ಠಾಪನೆ' ಕಾರ್ಯಕ್ರಮಕ್ಕೂ ಮುನ್ನ 'ಪ್ರಾಯಶ್ಚಿತ್ತ' ಮತ್ತು 'ಕರ್ಮಕುಟಿ' ಪೂಜೆಯೊಂದಿಗೆ ಪ್ರಾರಂಭವಾಗುವುದು ಎಂದಿದೆ.