HEALTH TIPS

"ಪುನರ್‌ಪರಿಶೀಲನೆ ಆದೇಶಗಳಿರುವುದು ಕಪಾಟಿನಲ್ಲಿ ಇಡಲು ಅಲ್ಲ": ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

              ವದೆಹಲಿ :ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಸರ್ವೋಚ್ಚ ನ್ಯಾಯಾಲಯವು, ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಮರುಸ್ಥಾಪನೆ ಕುರಿತು ಮೇ 2020ರಲ್ಲಿ ರಚಿಸಲಾಗಿದ್ದ ವಿಶೇಷ ಸಮಿತಿಯ ಪುನರ್‌ಪರಿಶೀಲನೆ ಆದೇಶಗಳಿರುವುದು ಕಪಾಟಿನಲ್ಲಿ ಇಡಲು ಅಲ್ಲ,ಅವುಗಳನ್ನು ಪ್ರಕಟಿಸಬೇಕು ಎಂದು ಎಂದು ಕಟುವಾಗಿ ಹೇಳಿದೆ.

            ಮೇ, 2020ರಲ್ಲಿ ಇಂಟರ್ನೆಟ್ ನಿರ್ಬಂಧಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಮೇಲೆ ನಿರ್ಬಂಧಗಳ ಅಗತ್ಯವನ್ನು ಪರಿಶೀಲಿಸಲು ವಿಶೇಷ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

             ಆಗಸ್ಟ್ 2019ರಲ್ಲಿ ಸಂವಿಧಾನದ 370ನೇ ವಿಧಿ ಮತ್ತು ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸುವುದರೊಂದಿಗೆ ಕೇಂದ್ರವು ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ಮೇಲೆ ನಿರ್ಬಂಧಗಳನ್ನು ಹೇರಲು ಆರಂಭಿಸಿತ್ತು. ಇಂಟರ್ನೆಟ್ ಮೇಲಿನ ನಿರ್ಬಂಧಗಳ ಪುನರ್‌ಪರಿಶೀಲನೆಯನ್ನು ಕೋರಿ ಪತ್ರಕರ್ತೆ ಅನುರಾಧಾ ಭಾಸಿನ್ ಅವರು ಜನವರಿ, 2020ರಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ನ್ಯಾಯಾಲಯವು ಭಾಸಿನ್ ಅವರ ವಾದವನ್ನು ಒಪ್ಪಿದ್ದು ಮಾತ್ರವಲ್ಲ,ವಿಶೇಷ ಸಮಿತಿ ರಚನೆಗೆ ಕೇಂದ್ರಕ್ಕೆ ನಿರ್ದೇಶನವನ್ನೂ ನೀಡಿತ್ತು.

              ಈ ಹಿನ್ನೆಲೆಯಲ್ಲಿ, ಮಂಗಳವಾರ ಫೌಂಡೇಷನ್ ಫಾರ್ ಮೀಡಿಯಾ ಪ್ರೊಫೆಷನಲ್ಸ್ ಪರ ನ್ಯಾಯವಾದಿ ಶಾದಾನ್ ಫರಾಸತ್ ಅವರು, ಅನುರಾಧಾ ಭಾಸಿನ್ ತೀರ್ಪು ಮತ್ತು ಭಾರತೀಯ ಟೆಲಿಗ್ರಾಫ್ ಕಾಯ್ದೆಗೆ ಅನುಗುಣವಾಗಿ ಆಡಳಿತವು ಜಮ್ಮು-ಕಾಶ್ಮೀರದಲ್ಲಿ ಇಂಟರ್ನೆಟ್ ನಿರ್ಬಂಧಗಳ ಕುರಿತು ಪುನರ್‌ಪರಿಶೀಲನೆ ಆದೇಶಗಳು ಮತ್ತು ಮಾತೃ ಆದೇಶವನ್ನು ಪ್ರಕಟಿಸುವುದು ಅಗತ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

            ಇದಕ್ಕೆ, ಜಮ್ಮು-ಕಾಶ್ಮೀರ ಆಡಳಿತದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ.ಎಂ.ನಟರಾಜ ಅವರು, 'ಹಿಂದಿನ ಅರ್ಜಿಗಳಲ್ಲಿಯ ಎಲ್ಲ ಕೋರಿಕೆಗಳನ್ನು ನಾವು ಈಡೇರಿಸಿದ್ದೇವೆ. ನ್ಯಾಯಾಂಗ ನಿಂದನೆ ಅರ್ಜಿಯೂ ಸಲ್ಲಿಕೆಯಾಗಿತ್ತು ಮತ್ತು ಅದು ವಜಾಗೊಂಡಿದೆ. ಈಗ ಅವರು ವಿಶೇಷ ಸಮಿತಿಯ ಶಿಫಾರಸುಗಳು ಮತ್ತು ಚರ್ಚೆಗಳ ಪ್ರಕಟಣೆಗಾಗಿ ಹೊಸ ಕೋರಿಕೆಯೊಂದಿಗೆ ಬಂದಿದ್ದಾರೆ' ಎಂದು ಹೇಳಿದರು.

                 ಈ ಹಂತದಲ್ಲಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂಜಯ ಕರೋಲ ಅವರ ಪೀಠವು, 'ಸಮಿತಿಯ ಚರ್ಚೆಗಳನ್ನು ಪ್ರಕಟಿಸುವ ಅಗತ್ಯವಿಲ್ಲದಿರಬಹುದು, ಆದರೆ ಹೊರಡಿಸಲಾದ ಪುನರ್‌ಪರಿಶೀಲನೆ ಆದೇಶಗಳನ್ನು ಪ್ರಕಟಿಸುವುದು ಅಗತ್ಯವಾಗಿದೆ. ಪುನರ್‌ಪರಿಶೀಲನೆ ಆದೇಶಗಳು ಇರುವುದು ಕಪಾಟಿನಲ್ಲಿ ಇರಿಸಲು ಅಲ್ಲ' ಎಂದು ಹೇಳಿತು.

              ಸರ್ವೋಚ್ಚ ನ್ಯಾಯಾಲಯವು ಎಎಸ್‌ಜಿ ಅವರು ಸಂಬಂಧಿಸಿದ ಅಧಿಕಾರಿಗಳಿಂದ ಸೂಚನೆಗಳನ್ನು ಪಡೆದುಕೊಳ್ಳಲು ಎರಡು ವಾರಗಳ ಕಾಲಾವಕಾಶವನ್ನು ಜಮ್ಮು-ಕಾಶ್ಮೀರ ಆಡಳಿತಕ್ಕೆ ನೀಡಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries